ವಿಜಯವಾಣಿ ಸುದ್ದಿಜಾಲ ಕೋಲಾರ
ಕಂದಾಯ ಇಲಾಖೆ ಭೂ ಮಂಜೂರಾತಿ ಸಮಿತಿಯಿಂದ ಸಕ್ರಮವಾಗಿ ದಾಖಲೆಗಳನ್ನು ನೀಡಿ ನೂರಾರು ವರ್ಷಗಳಿಂದ ರೈತರು ಸ್ವಾಧೀನದಲ್ಲಿದ್ದರು ಅರಣ್ಯ ಇಲಾಖೆಯವರು ಜಮೀನು ನಮಗೆ ಸೇರಿದ್ದು ಎಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದರ ಜೊತೆಗೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಒಂದು ವಾರದೊಳಗಾಗಿ ಜಿಲ್ಲಾಡಳಿತ ರೈತರ ಮತ್ತು ಅರಣ್ಯ ಇಲಾಖೆಯವರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸದಿದ್ದಲ್ಲಿ ರೈತರ ನೆಡೆ ಬೇರೆ ರೀತಿಯಾಗುತ್ತದೆಂದು ಸಂಯುಕ್ತ ಹೋರಾಟ ಜಿಲ್ಲಾ ಘಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ನಗರದ ಪತ್ರಕರ್ತರ ಭವನದಲ್ಲಿ ಸಂಯುಕ್ತ ಹೋರಾಟ ಜಿಲ್ಲಾ ಘಟಕ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ವತಿಯಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಸ್ವಾತಂತ್ರö್ಯ ಪೂರ್ವ ಮತ್ತು ನಂತರ ದಿನಗಳಿಂದಲೂ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ್ದು ಎಂದು ರೈತರಿಗೆ ಸಾಗುವಳಿ ಚೀಟಿ ನೀಡಿ ಫಹಣಿ ಮ್ಯೂಟೇಷನ್ ಎಲ್ಲವೂ ನೀಡಿ ಜಮೀನಿಗೆ ಅಕ್ರಮವಾಗಿ ಬೇಸಾಯಕ್ಕೆ ಯೋಗ್ಯವಾಗಿರುವ ಕಂದಾಯ ಭೂಮಿಯನ್ನು ಫಹಣಿಗಳ ಕಲಂ ೯ರಲ್ಲಿ ಅರಣ್ಯ ಎಂದು ಇಂಡೀಕರಿಸಿರುವ ಎಂ.ಆರ್.ಗಳನ್ನು ಕಂದಾಯ ಇಲಾಖೆಯವರು ರದ್ದುಪಡಿಸಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
೨೦-೩೦ ಎಕರೆ ಹೊಂದಿರುವ ಬಲಾಢ್ಯರ ಜಮೀನಿಗಳ ಪರ ನಮ್ಮ ಹೋರಾಟ ಸಮಿತಿ ನಿಂತಿಲ್ಲ. ೩೦ ಗುಂಟೆ ಒಂದು ಎಕೆರೆ ೪ ಎಕರೆ ಹೊಂದಿರುವ ರೈತರ ಪರ ನಾವು ನಿಂತಿದ್ದೇವೆ. ೩೦-೪೦ ಎಕರೆ ಹೊಂದಿರುವ ರೈತರ ತಂಟೆಗೆ ಅರಣ್ಯ ಇಲಾಖೆ ಹೋಗುತ್ತಿಲ್ಲ. ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಡ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರಿಗೆ ಕಂದಾಯ ಇಲಾಖೆಯವರೇ ದಾಖಲೆಗಳನ್ನು ನೀಡಿದ್ದಾರೆ. ೧೯೪೭ ರಿಂದ ೨೦೨೦ ರ ತನಕವೂ ಹಂತ ಹಂತವಾಗಿ ಸಾಗುವಳಿ ಚೀಟಿಗಳನ್ನು ನೀಡಿದ್ದಾರೆ. ಭೂ ಮಂಜೂರಾತಿ ಸಮಿತಿಯಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುತ್ತಾರೆ. ಅರಣ್ಯ ಇಲಾಖೆಯವರು ಸದಸ್ಯರಾಗಿರುತ್ತಾರೆ. ಆಗ ಅವರಿಗೆ ಇದು ಅರಣ್ಯ ಇಲಾಖೆ ಎಂದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಇಷ್ಟು ವರ್ಷಗಳ ಕಾಲ ಅರಣ್ಯ ಇಲಾಖೆಯವರು ಸುಮ್ಮನಿದ್ದಿದ್ದು ಏಕೆ? ರಾತ್ರೋರಾತ್ರಿ ರೈತರ ಬೆಳೆ ಮತ್ತು ಮಾವಿನ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರೂ ದಾಖಲೆಗಳನ್ನು ಪರಿಶೀಲಿಸದೇ ರೈತರ ಮೇಲೆ ಅರಣ್ಯ ಇಲಾಖೆಯವರು ದಬ್ಬಾಳಿಕೆ ಮಾಡಿತ್ತಿದ್ದುರೂ ಜಿಲ್ಲಾಡಳಿತ ಮೌನವಹಿಸಿದೆ. ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು. ರೈತರಿಗಾಗಿರುವ ನಷ್ಟ ತುಂಬಬೇಕು. ಮತ್ತು ರೈತರು ಬೆಳೆ ಮಾಡಲು ಮುಂದಾದಾಗ ಅಡ್ಡಿಪಡಿಸಬಾರದು. ರೈತರು ಅರಣ್ಯ ಇಲಾಖೆಯ ವಿರುದ್ಧ ದೂರು ನೀಡಿದಾಗ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಸತೀಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಟಿ.ಎಂ.ವೆAಕಟೇಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ನಮ್ಮ ಕೋಲಾರ ರೈತ ಸಂಘದ ಅಧ್ಯಕ್ಷ ಗಣೇಶ್ ಗೌಡ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಭೀಮರಾಜು, ಕೆ.ಆರ್.ಆರ್.ಎಸ್.ನಗರ ಘಟಕದ ಅಧ್ಯಕ್ಷ ರಘುಗೌಡ, ಇಂಜಿನೀಯರ್ ನಾರಾಯಣಸ್ವಾಮಿ, ಫಾರುಕ್ ಇದ್ದರು.
ಚಿತ್ರ : ೨೩ ಕೆ.ಎಲ್.ಆರ್. ೦೩ : ಕಂದಾಯ ಮತ್ತು ಅರಣ್ಯ ಇಲಾಖೆ ವಿರುದ್ಧ ಸಂಯುಕ್ತ ಹೋರಾಟ ಜಿಲ್ಲಾ ಘಟಕ ವತಿಯಿಂದ ಪತ್ರಿಕಾಗೋಷ್ಠಿ