ನ್ಯೂಸ್

ಬಲವಂತವಾಗಿ ಜಾಗ ಕಸಿಯುವ ಹುನ್ನಾರ

ಸುಂಟಿಕೊಪ್ಪ:
7ನೇ ಹೊಸಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಜಾಗವನ್ನು ಬಲವಂತವಾಗಿ ವೃದ್ಧಾಶ್ರಮವೊಂದಕ್ಕೆ ನೀಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಆರೋಪಿಸಿದರು.

ಸುಂಟಿಕೊಪ್ಪದ ನ್ಯೂಸ್ ಗ್ಯಾಲರಿ ಆವರಣದಲ್ಲಿ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಲವಂತವಾಗಿ ಜಾಗ ಪಡೆಯುವುದರ ಹಿಂದೆ ಮಡಿಕೇರಿ ಕ್ಷೇತ್ರದ ಶಾಸಕರು ಮತ್ತು 7ನೇ ಹೊಸಕೋಟೆ ಗ್ರಾಪಂ ಅಧ್ಯಕ್ಷ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಕುಮ್ಮಕ್ಕು ಇದೆ ಎಂದು ದೂರಿದರು.

ಮಾಲೀಕರಾದ ಆನಂದ ಕುಮಾರ್ ಅವರ ಕುಟುಂಬಸ್ಥರನ್ನು ಶಾಸಕರು ಮತ್ತು ಬಿಜೆಪಿ ಮುಖಂಡರು ಹೆದರಿಸಿ, ಬಲವಂತವಾಗಿ ತೆರವುಗೊಳಿಸಿದ್ದಾರೆ. ಈ ಸಂಬಂಧ ತಹಸೀಲ್ದಾರ್, ಉಪ ತಹಸೀಲ್ದಾರ್, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗೆ ಈಗಾಗಲೇ ದೂರು ನೀಡಿದ್ದು, ಕ್ರಮ ಕೈಗೊಳ್ಳದಿದ್ದರೆ ಕುಶಾಲನಗರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ 7ನೇ ಹೊಸಕೋಟೆ ಗ್ರಾಪಂ ಸದಸ್ಯರಾದ ಕುಂಞಿಕುಟ್ಟಿ ಮುಸ್ತಾಫ, ಸಿದ್ದೀಕ್, ಗ್ರಾಮಸ್ಥರಾದ ದಾಸಂಡ ದಿನೇಶ್ ಹಾಗೂ ಜಾಗದ ಮಾಲೀಕ ಆನಂದ ಕುಮಾರ್ ಇತರರು ಇದ್ದರು.