ನಗರದ ಸಬರ್ಬನ್ ಬಸ್(ಗ್ರಾಮಾಂತರ) ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುವ ಸರ್ಕಾರದ ಯೋಜನೆಗೆ ಈ ಸಂಬಂಧ ಸಾರ್ವಜನಿಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯೋಜನೆಯನ್ನು ಕೆಲವರು ಸ್ವಾಗತಿಸಿದರೆ ಇದರ ವಿರುದ್ಧ ಹೋರಾಟ ರೂಪಿಸಲು ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಮುಂದಾಗಿದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಈಗಾಗಲೇ 120 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆಯನ್ನೂ ಪಡೆಯಲಾಗಿದೆ. ಬಸ್ ನಿಲ್ದಾಣ ಸ್ಥಳಾಂತರವಾದರೆ ನಗರದ ಹೃದಯ ಭಾಗದಲ್ಲಿರುವ ವರ್ತಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ನಗರದ ಬಹುತೇಕ ಪ್ರವಾಸಿ ತಾಣಗಳು ನಗರದ ಹೃದಯ ಭಾಗದಲ್ಲಿವೆ. ಬಸ್ ನಿಲ್ದಾಣ ಸ್ಥಳಾಂತರದಿಂದ ಪ್ರವಾಸಿಗರಿಗೂ ಸಮಸ್ಯೆ ಎದುರಾಗಲಿದೆ. ಹಾಗಾಗಿ ಈ ಯೋಜನೆ ಕೈ ಬಿಡಬೇಕು ಎಂಬ ಒತ್ತಾಯ ಜೋರಾಗಿದೆ.
ಬಸ್ ನಿಲ್ದಾಣ ಸ್ಥಳಾಂತರಿಸಿದರೆ ವ್ಯಾಪಾರ, ವಹಿವಾಟು ನಷ್ಟವಾಗುತ್ತದೆ, ಪ್ರವಾಸಿಗರಿಗೂ ತೊಂದರೆಯಾಗುತ್ತದೆ. ಬಸ್ ನಿಲ್ದಾಣದ ಸಮೀಪ ವಿವಿಧ ವ್ಯಾಪಾರ -ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂಬ ಆತಂಕವೂ ಅವರಲ್ಲಿದೆ. ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನತ್ತ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಪಾರಂಪರಿಕ ನಗರಿ, ಸ್ವಚ್ಛನಗರಿ, ಪಿಂಚಣಿದಾರರ ಸ್ವರ್ಗ ಎಂದೇ ಕರೆಯಲ್ಪಡುವ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಅಲ್ಲದೆ, ನೆರೆ ರಾಜ್ಯಗಳಿಂದಲೂ ಮೈಸೂರಿಗೆ ಬರುವ ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ದಶಕಗಳ ಹಿಂದೆ ನಿರ್ಮಿಸಲಾಗಿರುವ ಸಬರ್ಬನ್ ಬಸ್(ಗ್ರಾಮಾಂತರ) ನಿಲ್ದಾಣ ಪ್ರಸ್ತುತ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಗೆ ಕಿರಿದಾಗುತ್ತಿದೆ. ಸಾರಿಗೆ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಬಸ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಕೇವಲ 4 ಎಕರೆ ಜಾಗದಲ್ಲಿ ನಿರ್ಮಿಸಿರುವ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರತಿದಿನ 2600ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಬಸ್ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೂ ಕಷ್ಟವಾಗುತ್ತಿರುವುದನ್ನು ಮನಗಂಡು ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.