ಮಹಿಳೆಯರು ಸಾಧನೆಯ ಹಾದಿಯಲ್ಲಿರುವಾಗ ಹಲವಾರು ಅಡೆತಡೆಗಳು, ಸವಾಲುಗಳು ಬರುವುದು ಸಹಜ. ಅದನ್ನೆಲ್ಲ ಮೆಟ್ಟಿ ಮುನ್ನಡೆಯಬೇಕಾಗುತ್ತದೆ ಎಂದು ಪರ್ವತಾರೋಹಿ ಹಾಗೂ ಓಟಗಾರ್ತಿ ಶ್ಯಾಮಲಾ ಪದ್ಮನಾಭನ್ ಸಲಹೆ ನೀಡಿದರು.
ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮಾಡಲು ಯಾವುದೇ ವಯಸ್ಸಿನ ಮಿತಿಗಳಾಗಲಿ, ಸಮಯದ ಪರಿಮಿತಿ ಎನ್ನುವುದಾಗಲಿ ಇರುವುದಿಲ್ಲ. ಬದಲಿಗೆ ಸಾಧನೆಯ ಕನಸನ್ನು ದೊಡ್ಡದಾಗಿ ಕಾಣಬೇಕು. ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲಬಾರದು ಎಂದು ತಿಳಿಸಿದರು.
ಮಹಿಳೆಯರು ಮೊದಲು ನಿಮ್ಮನ್ನು ನೀವು ನಂಬಬೇಕು. ಆಗಲೇ ನಿಮ್ಮ ಸಾಮರ್ಥ್ಯ, ದಕ್ಷತೆ ತಿಳಿಯಲು ಸಾಧ್ಯವಾಗುತ್ತದೆ. ಸಾಧಸಲು ಯಾವ ರೀತಿಯ ಕೌಶಲ ಬೇಕು. ಏನೆಲ್ಲ ಮಿತಿಗಳಿವೆ ಎಂಬುದನ್ನು ಅರಿತುಕೊಳ್ಳಬೇಕು. ಕೆಲವರ ಸ್ಫೂರ್ತಿದಾಯಕ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಮಹಿಳೆ ಅಬಲೆಯಲ್ಲ ಸಬಲೆ. ಆಕೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಜತೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ಪುರುಷರಿಗೆ ಸಮನಾಗಿ ನಿಂತಿದ್ದಾಳೆ ಎಂದರು.
ಭಾರತದಂತಹ ದೇಶದಲ್ಲಿ ಮಹಿಳೆಯರು ತಾವು ಸಾಧನೆ ಮಾಡುವ ಜತೆಗೆ ಇತರರಿಗೆ ಸಹಾಯಹಸ್ತ ಚಾಚಬೇಕು. ಮಹಿಳೆಯರು ಏನೇ ಸಾಧಿಸಬೇಕಾದರೂ ಸರಿಯಾದ ರೀತಿಯಲ್ಲಿ ಯೋಜನೆಗಳು, ಪರಿಶ್ರಮ, ಸಿದ್ಧತೆಗಳನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ತಾವು ಮಹಿಳೆಯಾಗಿ ಪರ್ವತಾರೋಹಣದ ಸಮಯದಲ್ಲಿ ಎದುರಿಸಿದ ಸವಾಲುಗಳು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶ್ವವಿಖ್ಯಾತಿ ಪಡೆದಿರುವ ಹಲವು ಮಹಿಳಾ ಸಾಧಕಿಯರ ಬಗ್ಗೆ ತಿಳಿಸಿದರು.
ಚೈತನ್ಯ ಧ್ಯಾನಮಂದಿರ ಮುಖ್ಯಸ್ಥೆ ಜಿ.ಮನೋರಮಾ, ಜೆಎಸ್‌ಎಸ್ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ, ಪ್ರೊ.ಕೆ.ಎಸ್ ಪೂರ್ಣಿಮಾ, ಎನ್.ದೀಪಾ ಹಾಜರಿದ್ದರು.