ಬೀರೂರು: ಪ್ರಾಚೀನರು ಅನುಸರಿಸಿಕೊಂಡು ಬಂದ ಯೋಗ, ಪ್ರಾಣಾಯಾಮ ಆಹಾರಸೂತ್ರಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಕರಾಗಿ ಎಂದು ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಕೆ.ಎಲ್.ಕೆ.ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಆರೋಗ್ಯಧಾಮ ಯೋಗ ಸಾಂಸ್ಕೃತಿಕ ಕೇಂದ್ರ, ಶಿವಮೊಗ್ಗ ಯೋಗ ವಿಸ್ಮಯ ಟ್ರಸ್ಟ್ , ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ಶಿಬಿರ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗಗುರುಗಳು ಕಲಿಸುವ ಉಚಿತ ಯೋಗವನ್ನು ಯುವಪೀಳಿಗೆ ಯೋಗ ಸಾಧನೆಗೆ ಬಳಸಿಕೊಂಡು ಮತ್ತೊಬ್ಬರಿಗೆ ಕಲಿಸಬೇಕು ಎಂದರು.
ಬೀರೂರು ರಂಭಾಪುರಿ ಖಾಸಾಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಹಿಂದೆ ನಮ್ಮ ಅಡುಗೆ ಮನೆಗಳು ಆರೋಗ್ಯ ಕೇಂದ್ರಗಳಾಗಿದ್ದವು. ನಮ್ಮ ಸನಾತನ ಆರೋಗ್ಯ ಸೂತ್ರಗಳನ್ನು ತಾತ್ಸಾರ ಭಾವದಿಂದ ನೋಡುತ್ತಿರುವುದು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಪುರಸಭಾಧ್ಯಕ್ಷೆ ವನಿತಾ ಮಧು ಭಾವಿಮನೆ ಮಾತನಾಡಿ, ದೇಹ ಹಾಗೂ ಮನಸ್ಸಿನ ಸದೃಢತೆಗೆ ಯೋಗ ಸಂಜೀವಿನಿಯಂತಿದೆ. ಸಮತೋಲನ ಆರೋಗ್ಯಕ್ಕೆ ಪತಂಜಲಿ ಯೋಗಸೂತ್ರವನ್ನು ನಿತ್ಯ ಬದುಕಿನಲ್ಲಿ ಅನುಸರಿಸಿ ಎಂದರು.
ಯೋಗ ತರಬೇತುದಾರ ಡಾ. ಅನಂತ್, ಯೋಗವಿದ್ಯೆಯ ಮಹತ್ವ, ಸರಳ ಆಹಾರಸೂತ್ರಗಳು, ಸಿರಿಧಾನ್ಯಗಳ ಬಳಕೆ, ಆರೋಗ್ಯಯುತ ಬದುಕಿಗೆ ಪ್ರೇರಕವಾದ ಮಾಹಿತಿ ನೀಡಿದರು.
ಆರೋಗ್ಯಧಾಮ ಯೋಗ ಸಾಂಸ್ಕೃತಿಕ ಕೇಂದ್ರದ ಗೌರವಾಧ್ಯಕ್ಷ ಗೋಪಾಲಕೃಷ್ಣಗುಪ್ತಾ, ಮಾಜಿ ಪುರಸಭಾಧ್ಯಕ್ಷೆ ಸವಿತಾ ರಮೇಶ್, ನಿವೃತ್ತ ಯೋಧ ಮಹೇಶ್, ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಶಿಬಿರಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಪರಿಸರಪ್ರೇಮಿ ವೀರಭದ್ರಪ್ಪ ಹಾಗೂ ಶಿಬಿರದ ಯಶಸ್ವಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಆರೋಗ್ಯಧಾಮ ಯೋಗ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎಂ.ಮಲ್ಲಪ್ಪ, ನಿವೃತ್ತ ಶಿಕ್ಷಕ ಸಿ.ಸಿ.ಕುಮಾರ್, ಅಜ್ಜಂಪುರ ಪುಟ್ಟಸ್ವಾಮಿ, ಯೋಗಶಿಕ್ಷಕ ಚಂದ್ರಶೇಖರಾಚಾರ್, ವೈದ್ಯ ಬಿರದಾರ್, ಗವಿರಂಗಪ್ಪ, ಶಿಕ್ಷಕ ಸಂಪತ್‌ಕುಮಾರ್, ಪ್ರಾಧ್ಯಾಪಕ ಪ್ರದೀಪ್, ರಮೇಶ್, ನರಸಿಂಹಮೂರ್ತಿ, ಶ್ರೀನಿವಾಸ್, ಬಾಲಕೃಷ್ಣ, ಚಲುವರಾಜ್, ಸುಮಿತ್ರಮ್ಮ, ಶಶಿಧರ್, ರಾಕೇಶ್, ಅಶೋಕ್ ಇತರರಿದ್ದರು.