ನ್ಯೂಸ್

ಬದಲಾವಣೆ ಮೊದಲು ನಮ್ಮಲ್ಲಿ ಆಗಬೇಕು

ದಾವಣಗೆರೆ : ಮತ್ತೊಬ್ಬರಲ್ಲಿ ಕಾಣಬಯಸುವ ಬದಲಾವಣೆ ಮೊದಲು ನಿನ್ನಲ್ಲಿ ಆಗಲಿ ಎಂಬ ಗಾಂಧೀಜಿಯವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸುಧಾರಣೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತದಿಂದ ಮಹಾನಗರಪಾಲಿಕೆ ಆವರಣದಲ್ಲಿ ಶುಕ್ರವಾರ ಕೋವಿಡ್ ಮಾರ್ಗಸೂಚಿಯನ್ವಯ ಸರಳವಾಗಿ ಏರ್ಪಡಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯ, ಅಹಿಂಸೆ, ಸಮಾನತೆ, ಗ್ರಾಮ ಸ್ವರಾಜ್ಯ, ಸ್ವಚ್ಛ ಭಾರತ ಇವು ಗಾಂಧೀಜಿ ಅವರ ಕಲ್ಪನೆಗಳು. ಅವರ ತತ್ವಗಳನ್ನು ಪಾಲಿಸೋಣ. ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಸರಳತೆ ನಮಗೆ ಮಾದರಿಯಾಗಿದೆ ಎಂದರು.
ಮೇಯರ್ ಬಿ.ಜಿ. ಅಜಯಕುಮಾರ್ ಮಾತನಾಡಿ, ಗಾಂಧೀಜಿ ಅವರಂಥ ಹಿರಿಯರ ಮಾರ್ಗದಲ್ಲಿ ನಡೆದರೆ ದೇಶ ಸಮೃದ್ಧಿಯಾಗುತ್ತದೆ. ಮನುಕುಲಕ್ಕೆ ಒಳಿತಾಗಲು ಬೇಕಾದ ಅಂಶಗಳು ಅವರ ನಡೆಯಲ್ಲಿವೆ ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಗಾಂಧೀಜಿಗೂ ನಮ್ಮ ಪಾಲಿಕೆ ಮುಂದಿರುವ ಗಾಂಧಿ ಸ್ಮಾರಕಕ್ಕೂ ನಂಟಿದೆ. 1942 ರ ಆ. 9 ರಂದು ಗಾಂಧೀಜಿ ಕರೆ ನೀಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ 6 ಜನ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಗುಂಡಿಗೆ ಬಲಿದಾನವಾದ ಸ್ಮರಣಾರ್ಥ ಇಲ್ಲಿ ಗಾಂಧಿ ಸ್ಮಾರಕವನ್ನು ಸ್ಥಾಪಿಸಲಾಗಿದೆ ಎಂದರು.
ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಗಾಂಧೀಜಿ ನಮ್ಮಂತೆ ಸಾಮಾನ್ಯ ವ್ಯಕ್ತಿಯಂತಿದ್ದರೂ ಅವರ ನಿಲುವು, ನಿರ್ಧಾರಗಳಿಂದ ಮಹಾತ್ಮರಾದರು. ಎಲ್ಲ ಧರ್ಮಗ್ರಂಥಗಳ ಸಾರವನ್ನು ಅರಿತು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು.
...
ಸುಶ್ರಾವ್ಯ ಗಾಯನ
ಪ್ರೌಢಶಾಲಾ ಶಿಕ್ಷಕರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವಜನತೋ, ರಘುಪತಿ ರಾಘವ ರಾಜಾರಾಂ ಸೇರಿದಂತೆ ಇತರೆ ಗೀತೆಗಳ ಸುಶ್ರಾವ್ಯ ಗಾಯನ ಪ್ರಸ್ತುತಪಡಿಸಿದರು. ಸರ್ವಧರ್ಮ ಪ್ರಾರ್ಥನೆ ನೆರವೇರಿತು.
ಉಪ ಮೇಯರ್ ಸೌಮ್ಯಾ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಪ್ರತಿಪಕ್ಷ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಎಸ್ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಇನ್ನಿತರ ಅಧಿಕಾರಿಗಳು ಇದ್ದರು.
ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸ್ವಾಗತಿಸಿದರು. ಸಂಗೀತ ಶಿಕ್ಷಕ ಅಜಯ್ ನಾರಾಯಣ್ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ಕೆ.ಜಿ.ಗೌಡ್ರು ನಿರೂಪಿಸಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ವಂದಿಸಿದರು.