ನ್ಯೂಸ್

ಬದಲಾದ ಆಹಾರ ಪದ್ದತಿ ಮತ್ತು ವ್ಯಾಯಾಮ ಕೊರತೆಯಿಂದ ಡಯಾಬಿಟೀಸ್ ಸಮಸ್ಯೆ ಉಲ್ಬಣಗೊಳ್ಳುತ್ತದೆ / ಇದರ ಬಗ್ಗೆ ಜಾಗೃತಿ ಅವಶ್ಯಕತೆ ಇದೆ / ಉಪ ಕುಲಪತಿ ಡಾ.ವೆಂಗಮ್ಮ

ವಿಜಯವಾಣಿ ಸುದ್ದಿಜಾಲ ಕೋಲಾರ
ಬದಲಾದ ಆಹಾರಪದ್ದತಿ, ವ್ಯಾಯಾಮದ ಕೊರತೆಯಿಂದ ಡಯಾಬಿಟೀಸ್ ಸಮಸ್ಯೆ ಉಲ್ಬಣಗೊಂಡಿದ್ದು, ಇದರಿಂದಾಗುವ ಅಂಗವೈಕಲ್ಯ ತಡೆಗೆ ಜನತೆಯಲ್ಲಿ ಜಾಗೃತಿ ಅಗತ್ಯವಿದೆ ಎಂದು ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಯ ಉಪಕುಲಪತಿ ಡಾ.ವೆಂಗಮ್ಮ ತಿಳಿಸಿದರು.

ಟಮಕದ ಜಾಲಪ್ಪ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಚರ್ಚಾಸ್ಪರ್ಧೆ, ರಸಪ್ರಶ್ನೆ, ಪ್ರಬಂಧ ಮತ್ತಿತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಅತಿ ಕಿರಿಯ ವಯಸ್ಸಿನಲ್ಲೂ ಕಾಣಿಸಿಕೊಳ್ಳುತ್ತಿದೆ, ಇದನ್ನು ಉತ್ತಮ ಆಹಾರ ಪದ್ದತಿ ಅಳವಡಿಸಿಕೊಳ್ಳುವುದರ ಜತೆಗೆ ಕಾಲಕಾಲಕ್ಕೆ ರಕ್ತಪರೀಕ್ಷೆ ನಡೆಸಿ ವೈದ್ಯರ ಸಲಹೆ ಪಾಲಿಸಿದಲ್ಲಿ ಅಂಗವೈಕಲ್ಯದAತಹ ಸಮಸ್ಯೆಯಿಂದ ದೂರವಾಗಿ ಉತ್ತಮ ಜೀವನ ನಡೆಸಬಹುದು ಎಂದರು.

ಕುಲಸಚಿವ ಡಾ.ಡಿವಿಎಲ್‌ಎನ್ ಪ್ರಸಾದ್ ಮಾತನಾಡಿ, ಮಧುಮೇಹಿಗಳು ಹೆದರುವ ಅಗತ್ಯವಿಲ್ಲ, ನಿಯಮಿತ ವ್ಯಾಯಾಮ ಅಳವಡಿಸಿಕೊಳ್ಳಿ, ರೋಗದ ಆರಂಭದ ಸೂಚನೆ ಸಿಕ್ಕ ಕೂಡಲೇ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಹತೋಟಿಗೆ ತರಬಹುದು. ಜಾಲಪ್ಪ ಆಸ್ಪತ್ರೆಯಲ್ಲಿ ಮಧುಮೇಹಿಗಳಿಗೆ ಸೂಕ್ತ ಚಿಕಿತ್ಸೆ, ತಪಾಸಣೆ ಸಲಹೆ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಲು ಕೋರಿದರು.

ವಿಶ್ವ ಮಧುಮೇಹಿಗಳ ದಿನದ ಅಂಗವಾಗಿ ನಗರದ ಜಾಲಪ್ಪ ಆಸ್ಪತ್ರೆ ಹೊರರೋಗಿಗಳ ವಿಭಾಗದಿಂದ ವಾಕಾಥಾನ್ ನಡೆಸಿ ಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ದೇವರಾಜ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ತಜ್ಷರಾದ ಡಾ.ಕೆ.ಎಸ್.ಸೋಮಶೇಖರರೆಡ್ಡಿ, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸಿ.ಆರ್.ವಿದ್ಯಾಸಾಗರ್, ಪ್ರಾಧ್ಯಾಪಕರಾದ ಡಾ.ಬಿ.ಎನ್.ರಾಘವೇಂದ್ರಪ್ರಸಾದ್, ಡಾ.ರವೀಶ್, ಡಾ. ಎಸ್.ವಿ.ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಪ್ರವೀಣ್, ಡಾ.ಎನ್.ಮಂಜುನಾಥ್, ಡಾ.ಮಾಧವಿ ರೆಡ್ಡಿ ಮತ್ತಿತರರರು ಹಾಜರಿದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೬ : ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.