ಶೃಂಗೇರಿ: ಶ್ರೀ ಶಾರದಾ ಪೀಠದ 35ನೇ ಪೀಠಾಧಿಪತಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ಸನ್ಯಾಸ ಸ್ವೀಕಾರವಾಗಿ 50 ವರ್ಷ ಪೂರೈಸಿದ್ದು ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಆರ್ಥಿಕ ಹಿಂದುಳಿದ ಜನರಿಗೆ ದಿನಬಳಕೆ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಅಧ್ಯಕ್ಷ ಎ.ಎಂ.ಶ್ರೀಧರ ರಾವ್ ಹೇಳಿದರು.
ಮೆಣಸೆ ಗ್ರಾಪಂ ವ್ಯಾಪ್ತಿಯ ಕೆರೆಮನೆ ಸರ್ಕಾರಿ ಶಾಲೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಭಾ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಮ್ಲೆಗುಡ್ಡದ ಅರ್ಹ ಲಾನುಭವಿಗಳಿಗೆ ದಿನಬಳಕೆ ವಸ್ತುಗಳನ್ನು ವಿತರಿಸಿ ಮಾತನಾಡಿದರು.
ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು 1974ರಲ್ಲಿ ಸನ್ಯಾಸ ಸ್ವೀಕರಿಸಿ 1989ರಲ್ಲಿ ಪಟ್ಟಾಭಿಷಿಕ್ತರಾದರು. ಜಗದ್ಗುರುಗಳ ಅವಧಿಯಲ್ಲಿ ಶ್ರೀಮಠದಲ್ಲಿ ಅನೇಕ ವಿಶೇಷ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕಾರ್ಯ ನಡೆದಿದೆ. ಸುವರ್ಣ ಸಂಭ್ರಮದ ವಿಶೇಷ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಶ್ರೀಮಠದ ನರಸಿಂಹವನದ ಶ್ರೀ ಭಾರತೀತೀರ್ಥ ನಗರದಲ್ಲಿ ಜ.11ರ ಬೆಳಗ್ಗೆ 10.30ಕ್ಕೆ ನಡೆಯಲಿದ್ದು ಎಲ್ಲರೂ ಶ್ರದ್ಧಾಭಕ್ತಿಯಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಹೆಬ್ಬಾರ ಸಮಾಜದ ಹೆಬ್ಬಿಗೆ ಅಮಿತ್ ಮಾತನಾಡಿ, ಸುವರ್ಣಭಾರತಿ ಅಂಗವಾಗಿ ಮೂಲ ಸೌಕರ್ಯಗಳಿಗೆ ಅಗತ್ಯವಾದ ಪರಿಕರಗಳನ್ನು ಇಲ್ಲಿ ವಿತರಿಸಲಾಗಿದೆ. ಪಡೆದ ವಸ್ತುವನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು.
ಶ್ರೀಮಠದ ಭಕ್ತರಾಗಿ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ 18 ಮನೆಗಳಿಗೆ ಬೆಡ್‌ಶೀಟ್, ರಗ್, ಪಾತ್ರೆ, ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹೆಬ್ಬಾರ್ ಸಂಘದ ಪದಾಧಿಕಾರಿಗಳಾದ ವೆಂಕಟಲಕ್ಷ್ಮೀ, ಭಾರತೀ ಬಾಲಕೃಷ್ಣ, ಗೌರಿ, ಯೋಗೀಶ, ಶಶಿಕಲಾ ಇದ್ದರು