ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಸರ್ಕಾರ ಬಡವರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಲು ಕೋಟ್ಯಾಂತರ ರೂ.ಗಳ ವ್ಯಯ ಮಾಡುತ್ತಿದೆ. ಆದರೆ ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದ್ದು, ದಳ್ಳಾಲಿಗಳದ್ದೇ ಇಲ್ಲಿ ಕಾರುಬಾರು. ಕಾಸು ಬಿಚ್ಚಿದರೆ ಬೇಗ ಚಿಕಿತ್ಸೆ ಇಲ್ಲದಿದ್ದರೆ ವಾರಗಟ್ಟಲೆ ಕಾಯಬೇಕು. ಮಧ್ಯವರ್ತಿಗಳ ಮಾತು ಕೇಳಿದರೆ ಖಾಸಗಿ ಆಸ್ಪತ್ರೆ ಸೇರಬೇಕು. ಈ ಪರಿಸ್ಥಿತಿ ಜಿಲ್ಲಾ ಆಸ್ಪತ್ರೆಯ ಕಥೆಯಾಗಿದೆ.
ಕೋಲಾರದ ಎಸ್.ಎನ್.ಆಸ್ಪತ್ರೆ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದ್ದು, ಪ್ರತಿದಿನ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ಸಮಸ್ಯೆಗಳ ಆಗರವಾಗಿದೆ. ಈ ಆಸ್ಪತ್ರೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲ್ಯಕ್ಷಿಸುತ್ತಿದ್ದು, ಆಸ್ಪತ್ರೆಗೆ ದಾಖಲಾದ ರೋಗಗಿಗಳಿಗೆ ವಾರವಾದರೂ ಚಿಕಿತ್ಸೆ ದೊರೆಯದ ಕಾರಣ ದೇಶ ವಿದೇಶಗಳಲ್ಲಿ ಈಗ ಸದ್ದು ಮಾಡುವಂತೆ ಆಗಿದೆ.
ಚಿಂತಾಮಣಿ ತಾಲ್ಲೂಕಿನ ವಯೋವೃದ್ಧರೊಬ್ಬ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿ ಒಂದು ವಾರವಾದರೂ ಚಿಕಿತ್ಸೆ ನೀಡದ ಕಾರಣ ಆತನ ಮಗ ವಿದೇಶದಲ್ಲಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲಿಗೆ ಎಳೆದ ನಂತರ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ನವಜಾತ ಮಕ್ಕಳ ಕಳುವು ಸೇರಿದಂತೆ ಖಾಸಗಿ ಆಂಬುಲೆನ್ಸ್ಗಳ ದರ್ಬಾರು, ಆಸ್ಪತ್ರೆಗೆ ಬಂದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಮಧ್ಯವರ್ತಿಗಳ ದರ್ಬಾರು ಸೇರಿದಂತೆ ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿ ಮತ್ತು ನರ್ಸುಗಳು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸದ್ದಾಗುತ್ತಲೇ ಇದ್ದರು ಸಹ ಮೇಲಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಮಧ್ಯವರ್ತಿಗಳ ಮೂಲಕ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲ ಎಂದು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವಂತಹ ಪಿತೂರಿ ನಿರಂತರವಾಗಿ ನಡೆಯುತ್ತಿದೆ.
ಆಸ್ಪತ್ರೆಯಲ್ಲಿ ಎಕ್ಸ್ ರೇ ಸಮಸ್ಯೆ :
ಜಿಲ್ಲಾಸ್ಪತ್ರೆಯಲ್ಲಿ ಎಕ್ಸ್ ರೇ ಮಾಡಿಸಲು ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ಆ ರೋಗಿಗಳಿಗೆ ಸರಿಯಾಗಿ ಎಕ್ಸ್ ರೇ ಸೌಲಭ್ಯವೇ ಸಿಗುತ್ತಿಲ್ಲ. ರೋಗಿಗಳಿಗೆ ಚೀಟಿ ನೀಡಲು ಬೆಳಿಗ್ಗೆ ೧೦.೩೦ ಗಂಟೆಗೆ ಟೋಕನ್ ಕೌಂಟರ್ ಬಾಗಿಲು ತೆರೆದರೆ ರೋಗಿಗಳು ಸರದಿ ಸಾಲಿನಲ್ಲಿ ನಿಂತು ಟೋಕನ್ ತೆಗೆದುಕೊಳ್ಳುವಷ್ಟರಲ್ಲಿ ೧೧ ಗಂಟೆಗೂ ಮೇಲೆ ಆಗುತ್ತದೆ. ನಂತರ ಟೋಕನ್ ಹಿಡಿದು ವೈದ್ಯರ ಬಳಿ ತಪಾಸಣೆಗೆಂದು ಕ್ಯೂನಲ್ಲಿ ನಿಂತರೆ ೧೨ ಗಂಟೆ ಸುಮಾರಿಗೆ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಲ್ಲಿಂದ ವೈದ್ಯರು ತಪಾಸಣೆ ಮಾಡಿ ಎಕ್ಸ್ ರೇ ಗೆ ಶಿಫಾರಸ್ಸು ಮಾಡಿದರೆ ಎಕ್ಸ್ ರೇ ಚೀಟಿ ಪಡೆಯಲು ಅರ್ಧ ಗಂಟೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ನಂತರ ಎಲ್ಲಾ ಮುಗಿಸಿ ಎಕ್ಸ್ ರೇ ಕೊಠಡಿಯ ಬಳಿ ಹೋದರೆ ಅಷ್ಟೊತ್ತಿಗಾಗಲೇ ಬಾಗಿಲು ಮುಚ್ಚಲಾಗಿದ್ದು, ನಂತರ ೨.೩೦ ಗಂಟೆಗೆ ಬರಲು ಸೂಚಿಸುತ್ತಾರೆ ಇದರಿಂದ ದೂರದ ಊರುಗಳಿಂದ ಬಂದಿದ್ದ ರೋಗಿಗಳು ಪ್ರತಿ ನಿತ್ಯ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಮಧ್ಯವರ್ತಿಗಳ ಹಾವಳಿ :
ಜಿಲ್ಲಾಸ್ಪತ್ರೆಗೆ ರೋಗಿಗಳು ತಪಾಸಣೆಗೆ ಬಂದಾಗ ವೈದ್ಯರು ರಕ್ತ ಪರೀಕ್ಷೆ ಮತ್ತು ಯಾವುದಾದರೂ ಸ್ಕ್ಯಾನಿಂಗ್‌ಗೆ ಚೀಟಿ ಬರೆದುಕೊಟ್ಟರೆ ರೋಗಿಗಳು ನೇರವಾಗಿ ಪರೀಕ್ಷೆ ಕೊಠಡಿಗಳ ಬಳಿ ಹೋದರೆ ಅಲ್ಲಿನ ಸಿಬ್ಬಂದಿ ತಡವಾಗುತ್ತದೆ ಎಂದು ನಿರ್ಲಕ್ಷದ ಮಾತುಗಳನ್ನಾಡುತ್ತಾರೆ. ಅಲ್ಲಿಯೇ ಕಾದು ಕುಳಿತಿರುವ ಮಧ್ಯವರ್ತಿಗಳು ಇಲ್ಲಿ ಪರೀಕ್ಷೆ ಮಾಡಿಸಲು ೨ ದಿನ ಕಾದರೂ ಕೆಲಸ ಆಗುವುದಿಲ್ಲ ಎಂದು ರೋಗಿಗಳಿಗೆ ಭಯ ಹುಟ್ಟಿಸಿ ಪಕ್ಕದ ಖಾಸಗಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಅಲ್ಲಿ ಖಾಸಗಿ ಸಂಸ್ಥೆಗಳಿAದ ಕಮೀಷನ್ ಪಡೆಯುತ್ತಾರೆ.
ಹಣ ಮತ್ತು ಪ್ರಭಾವ ಬಳಸಿ ಬರುವವರಿಗೆ ಉತ್ತಮ ಚಿಕಿತ್ಸೆ :
ರೋಗಿಗಳು ಯಾವುದೇ ಆರೋಗ್ಯ ಸಮಸ್ಯೆ ಎಂದು ಜಿಲ್ಲಾಸ್ಪತ್ರೆಗೆ ಬಂದರೆ ಬಡವರಿಗೆ ಯಾವುದೇ ರೀತಿಯ ಸಮರ್ಪಕ ಚಿಕಿತ್ಸೆ ಸಿಗುವುದಿಲ್ಲ, ಹಣ ಮತ್ತು ಪ್ರಭಾವ ಬಳಸಿಕೊಂಡು ಜಿಲ್ಲಾಸ್ಪತ್ರೆಗೆ ಬಂದರೆ ಮಾತ್ರ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಇಲ್ಲವಾದರೆ ಅಲ್ಲಿನ ಸಿಬ್ಬಂದಿ ರೋಗಿಯ ಬಗ್ಗೆ ನಿರ್ಲಕ್ಷದಿಂದ ವರ್ತಸಿ ಚಿಕಿತ್ಸೆ ನೀಡಲಾಗುತ್ತದೆ ಇದರಿಂದ ರೋಗಿಗಳು ಬೇಸತ್ತು ಪ್ರಾಣ ಕಾಪಾಡಿಕೊಳ್ಳಲು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಆಡಳಿತ ಯಂತ್ರ ಬಿಗಿಯಿಲ್ಲ :
ಜಿಲ್ಲಾಸ್ಪತ್ರೆಯ ಆಡಳಿತ ಯಂತ್ರ ನಿಭಾಯಿಸಬೇಕಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕರ ನಿರ್ಲಕ್ಷದಿಂದ ಜಿಲ್ಲಾಸ್ಪತ್ರೆಯಲ್ಲಿ ಒಂದಲ್ಲ ಒಂದು ಯಡವಟ್ಟುಗಳು ಉದ್ಭವಿಸುತ್ತಲೇ ಇವೆ, ಈಗಿರುವ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಭಾರಿಯಾಗಿದ್ದು ಸರ್ಕಾರ ಈ ಕೂಡಲೇ ಆಡಳಿತಯಂತ್ರ ಸಮರ್ಪಕವಾಗಿ ನಿಭಾಯಿಸುವ ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನು ನೇಮಕ ಮಾಡಿದರೆ ಮಾತ್ರ ಜಿಲ್ಲಾಸ್ಪತ್ರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕೋಟ್
ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲೆಂದೇ ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಕೋಟ್ಯಾಂತರ ರೂ.ಗಳನ್ನು ನೀಡುತ್ತಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ತಜ್ಞ ವೈದ್ಯರು ಇದ್ದರೂ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಹಣ ಕೊಟ್ಟರೆ ಚಿಕಿತ್ಸೆ ಸಿಗುತ್ತದೆ ಎಂಬAತಾಗಿದೆ. ಇದರಿಂದ ಬೇಸತ್ತು ಸರ್ಕಾರಿ ಆಸ್ಪತ್ರೆಯನ್ನು ಮರೆಯುವಂತೆ ಆಗಿದೆ. ಜನಪ್ರತಿಗಳು ಮತ್ತು ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಸಿಬ್ವಂದಿಗೆ ಮೇಜರ್ ಚಿಕಿತ್ಸೆ ನೀಡಿ ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕಾಗಿದೆ.
-ಡಾ.ಆರ್.ಶಂಕರಪ್ಪ, ಲೇಖಕರು, ಚಿಂತಕರು.
ಚಿತ್ರ ೨೪ ಕೆ.ಎಲ್.ಆರ್. ೦೧ : ಕೋಲಾರ ಜಿಲ್ಲಾಸ್ಪತ್ರೆ ಚಿತ್ರ
ಚಿತ್ರ ೨೪ ಕೆ.ಎಲ್.ಆರ್. ೦೧ಎ : ಡಾ.ಆರ್.ಶಂಕರಪ್ಪ, ಲೇಖಕರು, ಚಿತ್ರಕರು ರವರ ಭಾವಚಿತ್ರ