ನ್ಯೂಸ್

ಬಡವರ ಸಮಸ್ಯೆ ಪರಿಹರಿಸಲು ಅಸಡ್ಡೆ ತೋರಿದರೆ ಸುಮ್ಮನಿರಲ್ಲ

ಆಲೂರು: ಕೆಡಿಪಿ ಸಭೆ ನಡೆಸುವುದು ಕಾಟಾಚಾರಕ್ಕೆ ಅಲ್ಲ, ಬಡವರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಸಡ್ಡೆ ತೋರಿದರೆ ಸುಮ್ಮನಿರುವುದಿಲ್ಲ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2023-24ನೇ ಸಾಲಿನ ಮೊದಲ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅಧಿಕಾರಿಗಳ ಅಶಿಸ್ತು, ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದವರು ಮತ್ತು ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಶಾಸಕರು ಕೆಂಡಾ ಮಂಡಲರಾದರು.


ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ತಡವಾಗಿ ಬರುವುದನ್ನು ನಾನು ಸಹಿಸುವುದಿಲ್ಲ, ತಾಲೂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು. ನಾನು ಕ್ಷೇತ್ರಕ್ಕೆ ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಭೆಯಲ್ಲಿ 34 ಇಲಾಖೆಗಳ ಮುಖ್ಯಸ್ಥರು ಹಾಜರಿರಬೇಕಿತ್ತು, ಕೇವಲ 13 ಇಲಾಖೆಗಳ ಅಧಿಕಾರಿಗಳು ಬಂದರೆ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಮುಂದಿನ ಸಭೆಯಲ್ಲಿ 34 ಇಲಾಖೆಗಳ ಮುಖ್ಯಸ್ಥರು ಸಂಪೂರ್ಣವಾದ ಮಾಹಿತಿಯೊಂದಿಗೆ ಹಾಜರಿರಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.


ಎರಡ್ಮೂರು ವರ್ಷಗಳಿಂದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ನಡೆಯುವ ಕಾಮಗಾರಿ ನನೆಗುದಿಗೆ ಬಿದ್ದಿವೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಎಇಇ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.


ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರನಿಗೆ ನೋಟಿಸ್ ನೀಡಿ ರೀ-ಟೆಂಡರ್ ಮಾಡಿ ಬೇರೆವರಿಗೆ ಕಾಮಗಾರಿ ವಹಿಸಿಕೊಡಬೇಕು, ಕಳಪೆ ಕಾಮಗಾರಿ ಬಗ್ಗೆ ದೂರಿದ್ದು, ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತೇನೆ. ಕಾಮಗಾರಿ ಕಳಪೆ ಎಂದು ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ವಾಟೆಹೊಳೆ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಧರ್ಮರಾಜ್ ಮಾತನಾಡಿ, ಜಲಾಶಯದಿಂದ 18 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ನೀರು ಒದಗಿಸಬೇಕಾಗಿದೆ. ಅದರೆ ಇದುವರೆವಿಗೂ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರು ಹಾಯಿಸಲು ಸಾಧ್ಯವಾಗುತ್ತಿದೆ. ಕಾಲುವೆಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿರುವುದರಿಂದ ಕಾಲುವೆಗೆ ನೀರು ಬಿಡಲು ಆಗುತ್ತಿಲ್ಲ, ಕಾಲುವೆಗಳನ್ನು ಸಮಗ್ರವಾಗಿ ದುರಸ್ತಿಪಡಿಸಬೇಕು, ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.


ಇದಕ್ಕೆ ಶಾಸಕರು ಮಂಜುನಾಥ್ ಅವರು ಸಂಪೂರ್ಣ ಮಾಹಿತಿ ಇರುವ ದಾಖಲೆಗಳನ್ನು ನೀಡುವಂತೆ ಸೂಚಿಸಿದರು. ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವುದಾಗಿ ತಿಳಿಸಿದರು.


ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಂಬೇಡ್ಕರ್ ಭವನದ ಕೆಲವು ಕಾಮಗಾರಿ ಅರ್ಧಕ್ಕೆ ನಿಂತಿವೆ. ಇನ್ನೂ ಕೆಲವು ಕಾಮಗಾರಿ ಪ್ರಾರಂಭವಾಗಿಲ್ಲ, ಇದರಿಂದ ಪ್ರಗತಿ ಕುಂಠಿತವಾಗಿವೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.


ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು ಪ್ರತಿಕ್ರಿಯಿಸಿ, ಕೆಲವು ಗ್ರಾಮಗಳಲ್ಲಿ ಜಾಗದ ಕೊರತೆಯಾಗಿದೆ. ಹಾಗಾಗಿ ತಹಸೀಲ್ದಾರ್ ಹಾಗೂ ಭೂಮಾಪನಾ ಇಲಾಖೆಗೆ ಪತ್ರ ವ್ಯವಹಾರ ನಡೆದಿದೆ ಎಂದು ಉತ್ತರಿಸಿದರು. ಇದಕ್ಕೆ ಸಮಾಧಾನಗೊಳ್ಳದ ಶಾಸಕರು, ಜಾಗದ ಕೊರತೆ ಎದುರಾದರೆ ನಮ್ಮ ಗಮನಕ್ಕೆ ತರಬೇಕು, ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರಿ ಜಾಗ ಇರುವ ಕಡೆ ಅಥವಾ ಯಾರಾದರೂ ಜಾಗ ಕೊಡಲು ಮುಂದೆ ಬಂದರೆ ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸೋಣ ಎಂದರು.


ತಾಲೂಕಿನಲ್ಲಿ ಶಿಥಿಲಗೊಂಡಿರುವ ಶಾಲೆ-ಅಂಗನವಾಡಿ ಕಟ್ಟಡಗಳನ್ನು ದುರಸ್ತಿಪಡಿಸಲು ಮುಂದಾಗಬೇಕು, ಕೆಲವು ಕಟ್ಟಡಗಳು ಅರ್ಧಕ್ಕೆ ನಿಂತಿರುವ ಬಗ್ಗೆ ಮಾಹಿತಿ ಇದ್ದು, ಹಣದ ಕೊರತೆ ಇದ್ದರೆ ನನ್ನ ಜತೆ ಚರ್ಚಿಸಬೇಕು. ಅದಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಬೇಕು, ಅಗತ್ಯವಾಗಿ ಬೇಕಾಗಿರುವ ಕಟ್ಟಡಗಳಿಗೆ ಶಾಸಕರ ಅನುದಾನದಲ್ಲಿ ಹಣ ಕೊಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ತಹಸೀಲ್ದಾರ್ ಪ್ರಾಣೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.