ಆಯುಷ್ ಇಲಾಖೆಯಿಂದ ತೀರ್ಥಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ 6.50 ಕೋಟಿ ರೂ. ವೆಚ್ಚದ 10 ಹಾಸಿಗೆಯ ಆಯುಷ್ ಆಸ್ಪತ್ರೆಗೆ ಶಾಸಕ ಆರಗ ಜ್ಞಾನೇಂದ್ರ ಭೂಮಿಪೂಜೆ ನೆರವೇರಿಸಿದರು. ಗೀತಾ ರಮೇಶ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸುಶೀಲಾ ಶೆಟ್ಟಿ, ಶಬನಂ, ನಾಗರಾಜ್ ಇತರರಿದ್ದರು. 
ನ್ಯೂಸ್

ಬಡವರ ರಕ್ಷಣೆಗೆ ಸರ್ಕಾರಿ ಆಸ್ಪತ್ರೆಗಳು ಅನಿವಾರ್ಯ

ತೀರ್ಥಹಳ್ಳಿ: ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗುತ್ತಿದ್ದು ಬಡವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಗಳು ಅನಿವಾರ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಆಯುಷ್ ಇಲಾಖೆಯಿಂದ ಪಟ್ಟಣದ ಗಾಂಧಿನಗರದಲ್ಲಿ ನಿರ್ಮಾಣಗೊಳ್ಳಲಿರುವ 6.50 ಕೋಟಿ ರೂ. ವೆಚ್ಚದ 10 ಹಾಸಿಗೆಯ ಆಯುಷ್ ಆಸ್ಪತ್ರೆಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚಿನ ಕಾಯಿಲೆಗಳು ಹುಟ್ಟಿಕೊಳ್ಳುತ್ತಿದ್ದು ಮಾರಣಾಂತಿಕವಾಗಿ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಸರ್ಕಾರವೇ ಒದಗಿಸುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 6.50 ಕೋಟಿ ರೂ. ವೆಚ್ಚದ ಈ ಆಸ್ಪತ್ರೆ ಮಂಜೂರಾಗಿದೆ. ಇದರಲ್ಲಿ 5.20 ಕೋಟಿ ರೂ. ಕಟ್ಟಡ ಹಾಗೂ 1.20 ಕೋಟಿ ರೂ. ಸಲಕರಣೆ ಮತ್ತು ಲ್ಯಾಬೋರೇಟರಿಗೆ ಮೀಸಲಾಗಿದೆ. ಬಡವರು, ಕೂಲಿ ಕಾರ್ಮಿಕರು ಮತ್ತು ಆಯುರ್ವೇದ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗುವ ಅನಿವಾರ್ಯತೆ ತಪ್ಪಲಿದೆ. ಪ್ರಸ್ತುತ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ ಎಂದರು.

ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಆಯುರ್ವೇದ ಚಿಕಿತ್ಸೆ ಅನಾದಿಕಾಲದಿಂದಲೂ ಆಚರಣೆಯಲ್ಲಿದೆ. ಆಲೋಪತಿ ಚಿಕಿತ್ಸೆಯಲ್ಲಿ ಗುಣಪಡಿಸಲಾಗದ ರೋಗಗಳು ಆಯುರ್ವೇದ ಚಿಕಿತ್ಸೆಯಲ್ಲಿ ಗುಣವಾದ ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದರು. ಆಯುಷ್ ಇಲಾಖೆಯ ಅಧಿಕಾರಿ ಡಾ. ಗಣೇಶ್ ಕಾಮತ್ ಮಾತನಾಡಿ, 10 ಹಾಸಿಗೆಯ ಈ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸುಶೀಲಾ ಶೆಟ್ಟಿ, ಶಬನಂ, ರವೀಶ್ ಭಟ್, ಮಂಜುಳಾ ನಾಗೇಂದ್ರ, ಮುಖ್ಯಾಧಿಕಾರಿ ನಾಗರಾಜ್, ಗುತ್ತಿಗೆದಾರ ಎಸಿಸಿ ಕೃಷ್ಣಮೂರ್ತಿ ಇದ್ದರು.