ಕಳಸ: ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿ ಗಾಯಗೊಂಡ ಬಿಎಸ್‌ಎ್ ಯೋಧ ರಾಜಪ್ಪ ಅವರಿಗೆ ಕಳಸ ಯುವಕ ಸಂಘ ಸನ್ಮಾನ ಮಾಡಿ ಆರ್ಥಿಕ ನೆರವು ನೀಡಿದೆ. ಅಲ್ಲದೆ ಬಡ ಕುಟುಂಬವೊಂದಕ್ಕೆ ಶೌಚಗೃಹ ನಿರ್ಮಿಸಲು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.
ಕಳಸ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಿ ನಯನಾ ಮೋಟಮ್ಮ ಯೋಧ ರಾಜಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಕಳಸ ಯುವಕ ಸಂಘವು ಯೋಧ ರಾಜಪ್ಪ ಅವರಿಗೆ ಸನ್ಮಾನಿಸಿ 25 ಸಾವಿರ ರೂ. ನಗದು ನೀಡಿದರು. ಕಳಸ ಶಿವನಗರದ ಪಾಶ್ವವಾಯು ಪೀಡಿತ ವೃದ್ಧೆ ಲಕ್ಷ್ಮಮ್ಮ ಮತ್ತು ಆಕೆಯ ಅಂಗವಿಕಲ ಮಗಳಿಗೆ ನೆರವಾಗಲೆಂದು ಅವರ ಮನೆಯಲ್ಲಿ ಶೌಚಗೃಹ ಮತ್ತು ಸ್ನಾನದ ಕೊಠಡಿ ನಿರ್ಮಿಸಲು ಕಳಸ ಯುವಕ ಸಂಘ 20 ಸಾವಿರ ರೂ. ನೆರವು ನೀಡಿದರು.
ಶಾಸಕಿ ನಯನ ಮೋಟಮ್ಮ ಮಾತನಾಡಿ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕಳಸ ಯುವಕ ಸಂಘ ಮಾಡುತ್ತಿದ್ದು ಇದರಿಂದ ಇನ್ನಷ್ಟು ಕೆಲಸ ಮಾಡುವ ಪ್ರೇರಣೆ ದೊರೆಯುತ್ತಿದೆ ಎಂದು ಹೇಳಿದರು.
ಕಳಸ ಯುವಕ ಸಂಘದ ಕಟ್ಟಡಕ್ಕೆ 4 ಲಕ್ಷ ರೂ.ಅನುದಾನ ನೀಡಿದ ಶಾಸಕರನ್ನು ಯುವಕ ಸಂಘದ ಸದಸ್ಯರು ಸನ್ಮಾನಿಸಿದರು. ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕಾರ್ಯದರ್ಶಿ ವೀರೇಂದ್ರ, ಸದಸ್ಯರಾದ ರವಿ ಕೆಳಂಗಡಿ, ವಾಸುದೇವ, ಥಾಮಸ್, ಸತ್ಯೇಂದ್ರ, ಮೆಲ್ವಿನ್, ಕೃಷ್ಣಮೂರ್ತಿ, ರಾಘವೇಂದ್ರ, ಅರುಣ, ಸದಾನಂದ, ಅನಿಲ್ ಇತರರಿದ್ದರು.