ನ್ಯೂಸ್

ಬಜೆಟ್‌ನಲ್ಲಿ ಜಿಲ್ಲೆಯ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ

2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಯ ವಾಣಿಜ್ಯೋದ್ಯಮದ ಬೆಳವಣಿಗೆಗೆ ಪೂರಕ ಹಾಗೂ ನಗರದ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ಮೈಸೂರು ಜಿಲ್ಲೆಯ ಅಭಿವೃದ್ಧಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ಸರ್ಕಾರದಿಂದ ಕೈಗಾರಿಕಾ ಪಟ್ಟಣ ಪ್ರಾಧಿಕಾರಕ್ಕೆ, ವಿಶೇಷವಾಗಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶ ಹಾಗೂ ತಾಂಡ್ಯಾ ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ವಲಯಗಳನ್ನಾಗಿ ಪರಿಗಣಿಸಬೇಕು. ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳು ಸಂಕಷ್ಟದಲ್ಲಿದ್ದು, ಅವುಗಳ ಉತ್ತೇಜನಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕೋರಿದರು.

ಹೊರೆ ಸರಳೀಕರಣಗೊಳಿಸಿ: ಮೈಸೂರು ಜಿಲ್ಲೆಯಲ್ಲಿ ವಾಣಿಜ್ಯೋದ್ಯಮಕ್ಕೆ ವಿಧಿಸುತ್ತಿರುವ ತೆರಿಗೆ ಹೊರೆ ಸರಳೀಕರಣಗೊಳಿಸುವಂತೆ, ವಾಣಿಜ್ಯ, ವ್ಯಾಪಾರದ ಟ್ರೇಡ್ ಲೈಸನ್ಸ್ ಮನ್ನಾ ಮಾಡುವುದರ ಮೂಲಕ ವ್ಯಾಪಾರಸ್ಥರ ಅನುದಿನದ ತೊಂದರೆಗಳನ್ನು ನಿವಾರಣೆ ಮಾಡುವಂತೆ ಕೆ.ಬಿ.ಲಿಂಗರಾಜು ಮನವಿ ಮಾಡಿದರು.

ಅನುದಾನ ಬಿಡುಗಡೆ ಮಾಡಿ: ಮೈಸೂರಿನಲ್ಲಿ ಐಐಟಿ ಹಾಗೂ ಎಐಐಎಂಎಸ್ ಸಮನಾದ ಅಥವಾ ಮಾದರಿಯ ಸಂಸ್ಥೆಗಳನ್ನು ಸ್ಥಾಪಿಸಬೇಕು. ತುರ್ತು ಕೇಂದ್ರ, ವ್ಯಾಪಾರ ಕೇಂದ್ರ ಹಾಗೂ ಕೌಶಲಾಭಿವೃದ್ಧಿ ಕೇಂದ್ರಗಳಿಗೆ ವಿಶೇಷ ಅನುದಾನದ ಅವಶ್ಯಕತೆ ಇದೆ. ಆಯವ್ಯಯದಲ್ಲಿ ಆದ್ಯತೆ ಮೇರೆಗೆ ಇವುಗಳನ್ನು ಪರಿಗಣಿಸಬೇಕು. ಜಿಲ್ಲೆಯ ಸಂಘ, ಸಂಸ್ಥೆಗಳು ಕೌಶಲಾಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲು ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಲಿಂಗರಾಜು ಕೋರಿದರು.

ಮೈಸೂರಿನ ಪಾರ್ಕಿಂಗ್ ಸಮಸ್ಯೆಗೆ ನಿವಾರಿಸಲು ನಾಲ್ಕು ಜಾಗದಲ್ಲಿ ಪಾರ್ಕಿಂಗ್‌ಗೆ ಬಹುಮಹಡಿ ಕಟ್ಟಡ ನಿರ್ಮಿಸಲು ಮಂಜೂರಾತಿ ಕೊಡಬೇಕು. ಕರ್ನಾಟಕದಲ್ಲಿರುವ ಹಲವು ಪಾರಂಪರಿಕ ಕಟ್ಟಡಗಳ ನಿರ್ವಹಣೆಗಾಗಿ 1,000 ಕೋಟಿ ರೂ.ಗಳನ್ನು ಮುಂಬರುವ ಮುಂಗಡ ಪತ್ರಗಳಲ್ಲಿ ಮೀಸಲಿಡಬೇಕು ಎಂದು ಅವರು ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡಿದರು.

ಫ್ಲೈ ಓವರ್ ಅಗತ್ಯವಿದೆ

ಮೈಸೂರು ಹಾಗೂ ನಂಜನಗೂಡಿನ ಕೈಗಾರಿಕಾ ವಸಾಹತು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ, ಬಜೆಟ್‌ನಲ್ಲಿ 80 ಕೋಟಿ ರೂ. ಅನುದಾನ ನೀಡಲು ಕೋರಿದರು. ಮಣಿಪಾಲ್ ಆಸ್ಪತ್ರೆ ಬಳಿ ಇರುವ ಟ್ರಾಫಿಕ್ ಸಿಗ್ನಲ್‌ನಲ್ಲಿ ನಾಲ್ಕೂ ಕಡೆಯಲ್ಲೂ ಹೆಚ್ಚಿನ ವಾಹನ ಸಂದಣಿ ಇದೆ. ಅಲ್ಲಿ ತುರ್ತಾಗಿ ಫ್ಲೈ ಓವರ್ ಅವಶ್ಯಕತೆಯಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಿ, ಟೂರಿಸಂ ಅಥಾರಿಟಿಯ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚು ಅನುದಾನ ಮೀಸಲಿಡುವಂತೆ ಕೆ.ಬಿ.ಲಿಂಗರಾಜು ಮನವಿ ಮಾಡಿದರು.

ಮೈಸೂರು ದಸರಾ ನಾಡಹಬ್ಬದ ಒಂದು ತಿಂಗಳು ಮುಂಚಿತವಾಗಿ ಅಂತಾರಾಜ್ಯದ ತೆರಿಗೆ ವಿಶೇಷ ರಿಯಾಯಿತಿಯನ್ನು ನೀಡುವಂತೆ, ಎಲ್ಲ ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಒದಗಿಸುವಂತೆಯೂ ಅವರು ಸಿಎಂಗೆ ಮನವಿ ಮಾಡಿದರು.