ಬೆಂಗಳೂರು: ರಾಜ್ಯದ 2025-26ನೇ ಸಾಲಿನ ನೀಲನಕ್ಷೆ(ಬಜೆಟ್) ರೂಪಿಸಲು ಸಿಎಂ ಸಿದ್ದರಾಮಯ್ಯ ತಾಲೀಮು ಆರಂಭಿಸಿದ್ದಾರೆ(CM Siddaramaiah has started the exercise to prepare the blueprint (budget) for the year 2025-26 of the state).
ದಾಖಲೆಯ 16ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವ ಸಿದ್ದರಾಮಯ್ಯ ನಾಲ್ಕು ದಿನಗಳಿಂದ ವಿವಿಧ ಇಲಾಖೆ ಸಚಿವರು ಹಾಗೂ ಉನ್ನತಾಧಿಕಾರಿಗಳ ಜತೆ ನಿರಂತರ ಸಭೆ ನಡೆಸಿದರು.
ಗುರುವಾರ, ಶುಕ್ರವಾರ ಮತ್ತು ಶನಿವಾರ ಹತ್ತಾರು ಇಲಾಖೆಗಳ ಸಭೆ ನಡೆಸಿ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಸೋಮವಾರ 12 ಇಲಾಖೆಗಳ ಸಭೆ ನಡೆಸಿದ್ದಾರೆ. ಆಯಾ ಇಲಾಖೆಗಳ ಬೇಡಿಕೆಗಳು, ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಬಗ್ಗೆ ಒನ್ ಟು ಒನ್ ಸಮಾಲೋಚನೆ ನಡೆಸಿದ್ದಾರೆ.
ಸೋಮವಾರ ಕಾನೂನು, ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ, ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವಜನ ಸೇವೆ ಮತ್ತು ಕ್ರೀಡೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಭೆ ನಡೆಸಿದರು.
ಆಯಾ ಇಲಾಖೆಗಳು ತಮ್ಮ ಮುನ್ನಂದಾಜು, ಕಾರ್ಯರೂಪಕ್ಕೆ ತರಬಹುದಾದ ಹೊಸ ಯೋಜನೆಗಳು, ಕಾರ್ಯಕ್ರಮಗಳು, ಚಾಲ್ತಿ ವರ್ಷದ ಬಾಕಿ ಅನುದಾನ ಬಿಡುಗಡೆ, ಗುರಿ ಸಾಧನೆ ಕುರಿತು ಚರ್ಚಿಸಿದರು. ಮುಂದಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ ತಮ್ಮ ಇಲಾಖೆಗೆ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಮಂಡಿಸಿದರು.
ಪ್ರವಾಸೋದ್ಯಮಕ್ಕೆ ಮೂಲ ಸೌಕರ್ಯ:
ಪ್ರವಾಸೋದ್ಯಮ ನೀತಿಗೆ ಪೂರಕವಾಗಿ ಹೆಚ್ಚು ಅನುದಾನ ನೀಡಬೇಕು. ರಾಜ್ಯದ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹೆಚ್ಚು ಸಂಖ್ಯೆಯಲ್ಲಿ ಹೋಟೆಲ್ ಸ್ಥಾಪಿಸಬೇಕು. ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚು ಆರ್ಥಿಕ ನೆರವು ನೀಡಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮನವಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ.
ದೇವಸ್ಥಾನ ಅಭಿವೃಧ್ಧಿಗೆ ಅನುದಾನ:
ಮುಜರಾಯಿ ಇಲಾಖೆಗೆ ಸೇರಿದ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿ ಹಾಗು ತಸ್ತಿಕ್ ಹೆಚ್ಚಳಕ್ಕೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು. ವಾಯವ್ಯ ಸಾರಿಗೆ ಬಲವರ್ಧನೆಗೆ ಪೂರಕ ಅನುದಾನ ನೀಡಬೇಕು ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಡಿಕೆ ಮಂಡಿದ್ದಾರೆ ಎಂದು ಹೇಳಲಾಗಿದೆ.