ನ್ಯೂಸ್

ಬಜೆಟ್ ಅಧಿವೇಶನ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಜಾಣನಡೆ, ಸಚಿವಾಕಾಂಕ್ಷಿಗಳಲ್ಲಿ ಆತಂಕ

| ಶಿವಾನಂದ ತಗಡೂರು ಬೆಂಗಳೂರು

ಪಂಚರಾಜ್ಯ ಚುನಾವಣೆ ಫಲಿತಾಂಶ ಹಾಗೂ ಬಜೆಟ್ ಅಧಿವೇಶನ ತನಕ ಸಚಿವ ಸಂಪುಟ ವಿಸ್ತರಣೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರಕ್ಕೆ ಹೈಕಮಾಂಡ್ ಕೂಡ ಸಮ್ಮತಿ ಸೂಚಿಸಿದೆ ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ.

ಸಚಿವ ಸಂಪುಟ ಸೇರಬೇಕು ಎಂದು ಸತತ ಪ್ರಯತ್ನ ನಡೆಸುತ್ತಿರುವವರ ಸಂಖ್ಯೆಯೇ ಎರಡು ಡಜನ್ ದಾಟಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳವಾಗಬಹುದು ಎನ್ನುವ ಅಂದಾಜಿದೆ. ಸಚಿವ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸರ್ಕಸ್ ಮಾಡುತ್ತಿರುವ ಆಕಾಂಕ್ಷಿಗಳು, ಕೆಲ ಪ್ರಭಾವಿ ಸ್ವಾಮೀಜಿಗಳ ಮೂಲಕವೂ ಒತ್ತಡ ಹಾಕುವ ಪ್ರಯತ್ನ ಎಡೆಬಿಡದೆ ಮುಂದುವರಿಸಿದ್ದರು. ಈ ನಡುವೆಯೇ ಸಂಪುಟ ಸದ್ಯಕ್ಕಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಯಾರನ್ನು ಸಂಪುಟದಲ್ಲಿ ತೆಗೆದುಕೊಳ್ಳಬೇಕು? ಯಾವ ಕಾರಣಕ್ಕೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆಯೂ ಪಕ್ಷದ ಆಂತರಿಕ ವೇದಿಕೆಯಲ್ಲಿ ಹಲವು ಚರ್ಚೆ ನಡೆದಿದ್ದರೂ ಯಾವುದೂ ಅಂತಿಮ ತೀರ್ಮಾನ ಗಳಾಗಿರಲಿಲ್ಲ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.

ಹಲವರಿಗೆ ಗೇಟ್ ಪಾಸ್: ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 2008ರಲ್ಲಿ ಸರ್ಕಾರ ರಚನೆಯಾದ ಸಂದರ್ಭ ಸಚಿವರಾಗಿದ್ದವರಿಗೆ ಗೇಟ್ ಪಾಸ್ ಕೊಡುವುದು ಬಹುತೇಕ ಖಚಿತವಾಗಿದೆ. ಅಲ್ಲದೆ, ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಸರ್ಕಾರದಲ್ಲಿ ಸಚಿವರಾದವರಿಗೂ ಇದೇ ಮಾನದಂಡ ಅನ್ವಯಿಸಲು ಚಿಂತನೆ ನಡೆದಿದ್ದು, ಇದಕ್ಕೆ ಹೈಕಮಾಂಡ್ ಕೂಡ ಅಸ್ತು ಎನ್ನುವ ಸಂಭವ ಇದೆ ಎನ್ನಲಾಗಿದೆ.

ಸದ್ಯಕ್ಕೆ ಹಿರಿಯರಿಗೆ ರಿಲೀಫ್: ಸಂಪುಟ ವಿಸ್ತರಣೆಯಾದರೆ ತಮ್ಮ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೊ ಎನ್ನುವ ಆತಂಕದಲ್ಲಿದ್ದ ಸಚಿವರಿಗೆ ಸದ್ಯಕ್ಕೆ ಮಾರ್ಚ್ ತನಕ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಉತ್ತರಾಧಿಕಾರಿ ಎಂದು ಬಸವರಾಜ ಬೊಮ್ಮಾಯಿ ಬಿಂಬಿತವಾದರೂ, ಸರ್ಕಾರ ಮುನ್ನೆಡೆಸಲು ಪಕ್ಷದೊಳಗಿರುವ ಗುಂಪುಗಳನ್ನು ಸಂಭಾಳಿಸುವುದು ನಿತ್ಯವೂ ಸವಾಲಾಗಿದೆ. ಪಕ್ಷ ನಿಷ್ಠರು, ಭಿನ್ನರು, ವಲಸಿಗರು ಮತ್ತು ತಟಸ್ಥ ವಾಗಿರುವ ಗುಂಪುಗಳ ಜತೆ ಸದಾ ಸಂಪರ್ಕದಲ್ಲಿರುವ ಸಿಎಂ, ಅವರ ಕ್ಷೇತ್ರಗಳಿಗೆ ಅನುದಾನ ನೀಡುವ ಮೂಲಕ ಅವರನ್ನು ಹಿಡಿತದಲ್ಲಿ್ಲ್ಟುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ.

ಬಜೆಟ್ ಅಧಿವೇಶನ ನೆಪ: ಬಜೆಟ್ ಅಧಿವೇಶನ ಮುಗಿದ ಬಳಿಕ ಅಧಿವೇಶನವನ್ನು ಕನಿಷ್ಠ ಆರು ತಿಂಗಳು ಮುಂದೂಡಲಾಗುತ್ತದೆ. ಈ ಸಂದರ್ಭ ಬಳಸಿಕೊಂಡು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಸೂಕ್ತ ಎನ್ನುವ ಪಕ್ಷದೊಳಗಿನ ಅಭಿಪ್ರಾಯಕ್ಕೆ ಸಿಎಂ ಕೂಡ ಸಾಥ್ ನೀಡಿರುವುದು ವಿಶೇಷ.

ಜಂಟಿ ಅಧಿವೇಶನ: ಫೆಬ್ರುವರಿಯಲ್ಲಿ ಜಂಟಿ ಅಧಿವೇಶನ ನಡೆಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿಯೇ ಬಜೆಟ್ ಅಧಿವೇಶನ ಮಾಡಲು ಸಿಎಂ ಉದ್ದೇಶಿಸಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಪ್ರತಿಪಕ್ಷಗಳು ಮಾಡುವ ದಾಳಿಯಿಂದ ಸರ್ಕಾರವನ್ನು ರಕ್ಷಿಸಿಕೊಳ್ಳಲು ಸಿಎಂ ರಕ್ಷಣಾತ್ಮಕ ಹೆಜ್ಜೆ ಇಡಬೇಕಾಗಿದೆ. ಈ ಅಧಿವೇಶನಗಳಲ್ಲಿ ಅನುಭವಿ ಸಚಿವರುಗಳೇ ಇರುವುದರಿಂದ ಅಧಿವೇಶನ ಎದುರಿಸಲು ಕಷ್ಟವಾಗಲಾರದು ಎನ್ನುವುದು ಸಿಎಂ ಲೆಕ್ಕಾಚಾರ.

ಸರ್ಕಾರದ ಇಮೇಜ್: ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಇಮೇಜ್ ಹೆಚ್ಚಿಸಿಕೊಳ್ಳುವುದು ಬೊಮ್ಮಾಯಿ ಮುಂದಿರುವ ದೊಡ್ಡ ಟಾಸ್ಕ್. ಈ ನಿಟ್ಟಿನಲ್ಲಿಯೂ ಸಂಘಟಿತ ಪ್ರಯತ್ನ ಮಾಡುತ್ತಿರುವ ಸಿಎಂ, ಸಚಿವರಿಗೆ ಜವಾಬ್ದಾರಿ ವಹಿಸಿ ಒಗ್ಗಟ್ಟಿನಿಂದ ಪರಿಸ್ಥಿತಿ ಎದುರಿಸಲು ತೀರ್ವನಿಸಿದ್ದಾರೆ. ಮುಂದೆ ಹೊಸ ಸಚಿವರನ್ನು ಸಂಪುಟದಲ್ಲಿ ತರಬೇಕು ಎನ್ನುವ ಉಮೇದಿನಲ್ಲಿರುವ ಸಿಎಂಗೆ ಹೈಕಮಾಂಡ್ ಯಾವ ರೀತಿ ಸಲಹೆ ನೀಡುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಹೈಕಮಾಂಡ್​ಗೆ ಮನವರಿಕೆ: ರಾಜ್ಯದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ವಿಷದವಾಗಿ ಮನದಟ್ಟು ಮಾಡಿಕೊಟ್ಟಿರುವ ಸಿಎಂ, ಸಚಿವ ಸಂಪುಟ ವಿಷಯಕ್ಕೆ ಕೈ ಹಾಕಿದರೆ, ಜೇನುಗೂಡಿಗೆ ಕೈ ಹಾಕಿದಂತಾಗಲಿದೆ. ಆತುರ ಮಾಡದೆ, ನಿದಾನವಾಗಿ ಹೆಜ್ಜೆ ಇಡುವುದು ಸೂಕ್ತ. ಯಾರನ್ನೆ ಸಚಿವರನ್ನಾಗಿ ಮಾಡಲು ಹೊರಟರೂ ಅಪಾಯ ತಪ್ಪಿದ್ದಲ್ಲ ಎಂಬ ಸಿಎಂ ಅಭಿಪ್ರಾಯಕ್ಕೆ ಹೈಕ ಮಾಂಡ್ ಕೂಡ ತಲೆದೂಗಿದೆ.

ಡ್ಯಾಮೇಜ್ ಕಂಟ್ರೋಲ್: ಸಚಿವ ಸಂಪುಟ ವಿಷಯ ಇರಲಿ, ಸರ್ಕಾರದ ವಿಷಯವೇ ಆಗಿರಲಿ, ಆಡಳಿತ ಪಕ್ಷದ ಶಾಸಕರು ಡ್ಯಾಮೇಜ್ ಸ್ಟೇಟ್​ವೆುಂಟ್ ಮಾಡದಂತೆ ಕಂಟ್ರೋಲ್ ಮಾಡಲು ಖಡಕ್ ನಿರ್ದೇಶನವನ್ನು ನೀಡಲಾಗಿದೆ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಡ್ಯಾಮೇಜ್ ಸ್ಟೇಟ್​ವೆುಂಟ್ ಹೇಳಿಕೆಗಳು ಮಿತಿಮೀರಿ ಹೋಗಿದ್ದವು. ಅದಕ್ಕೆ ಈಗಿನಿಂದಲೇ ಕಡಿವಾಣ ಹಾಕುವಂತೆ ಸೂಚನೆ ನೀಡಲಾಗಿದೆ.