ನ್ಯೂಸ್

ಬಜರಂಗದಳ ಯುವ ಪಡೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಭ್ರಮದಿAದ ಹೋಳಿ ಹಬ್ಬ ಆಚರಣೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ನಗರದ ವಿವಿಧ ಬಡಾವಣೆಗಳಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಬಜರಂಗದ ದಳದ ಯುವ ಪಡೆ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು.

ಬಜರಂಗದಳದ ಮುಖಂಡ ಬಾಲಾಜಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸುವ ಹೊಣೆ ಹೊತ್ತಿರುವ ಯುವ ಸಮುದಾಯಕ್ಕೆ ಹೋಳಿ ಸಂಭ್ರಮ ಪರಸ್ಪರ ಸೌಹಾರ್ದತೆ ಮತ್ತು ಸ್ನೇಹಮಯ ವಾತಾವರಣ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.

ಹೋಳಿ ಹಬ್ಬ ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ, ಅದನ್ನು ಇಲ್ಲಿಯೂ ಆಚರಿಸುವ ಮೂಲಕ ನಮ್ಮ ಸಂಸ್ಕೃತಿ, ಧರ್ಮ, ಪರಂಪರೆ ಉಳಿಸುವುದರ ಜತೆಗೆ ಯುವ ಸಮುದಾಯದಲ್ಲಿನ ದ್ವೇಷ, ಅಸೂಯೆಯನ್ನು ನಾಶಪಡಿಸುವ ಪ್ರಯತ್ನವಾಗಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುವುದನ್ನು ತಪ್ಪಿಸಲು ಹೋಳಿ ಹಬ್ಬ ಹೆಚ್ಚು ಸಹಕಾರಿಯಾಗಿದೆ. ಯುವ ಸಮುದಾಯವನ್ನು ಒಂದೆಡೆ ಸೇರಿಸಿ ಉತ್ಸಾಹ, ಸಂಭ್ರಮ ತುಂಬುವ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆಗೆ ಪಣ ತೊಡುವಂತೆ ಈ ಹಬ್ಬ ಮಾಡಲಾಗುತ್ತಿದೆ ಎಂದರು.

ಯುವಕರ ತಂಡ ನಗರದ ವಿವಿಧೆಡೆ ಬಣ್ಣ ಎರಚಿಕೊಂಡು ಬೈಕ್ ರ‍್ಯಾಲಿ ನಡೆಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಯುವಕರನ್ನು ಪ್ರೇರೇಪಿಸಿತು.

ಬಜರಂಗದಳ ಏರ್ಪಡಿಸಿದ್ದ ಹೋಳಿ ಸಂಭ್ರಮದಲ್ಲಿ ಬಜರಂಗದಳ ಮುಖಂಡರು, ಯುವಕರು ಪಾಲ್ಗೊಂಡಿದ್ದರು.

ವಿವಿಧೆಡೆ ಹೋಳಿ ಸಂಭ್ರಮ :

ನಗರದ ವಿವಿಧ ಬಡಾವಣೆಗಳಲ್ಲಿ ಯುವಕರ ತಂಡಗಳು ಹೋಳಿ ಸಂಭ್ರಮದಲ್ಲಿ ತೊಡಗಿದ್ದುದು, ಕಂಡು ಬಂತು. ಕೆಲವು ಕಡೆ ದಾರಿಯಲ್ಲಿ ಸಾಗುವವರಿಗೂ ಹೋಳಿ ಹಾಕಿ ತಮ್ಮೊಂದಿಗೆ ಹಬ್ಬವನ್ನು ಖುಷಿಯಿಂದ ಆಚರಿಸಿಕೊಳ್ಳುವಂತೆ ಮಾಡಿದರು. ಎಲ್ಲಿಯೂ ಸಹ ಒತ್ತಾಯ ಪೂರ್ವಕವಾಗಿ, ಬಣ್ಣ ಎರಚಿ ತೊಂದರೆ ನೀಡದೆ ಸೌಹಾರ್ದತೆ ಮೆರೆದರು.

ಹೋಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೩ : ಕೋಲಾರ ನಗರದಲ್ಲಿ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಬಜರಂಗದಳದ ಯುವಪಡೆ ನೇತೃತ್ವದಲ್ಲಿ ಯುವಕರು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು.