ನ್ಯೂಸ್

ಫೇಸ್ ಬುಕ್ ಮೂಲಕ ವಂಚಿಸಿದ ಖದೀಮರು

ಚಿಕ್ಕಬಳ್ಳಾಪುರ: ಖದೀಮರು  ವ್ಯಾಪಾರಕ್ಕಾಗಿ ಬ್ಯಾಂಕ್ ಸಾಲ ಕೊಡಿಸುವ ನೆಪದಲ್ಲಿ ಫೇಸ್ ಬುಕ್ ಮೂಲಕ  ಬಾಗೇಪಲ್ಲಿಯ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದಾರೆ.

ಅಪರಿಚಿತರ ಮಾತನ್ನು ನಂಬಿಕೊಂಡು ಮೋಸ ಹೋದವರು ಬಾಗೇಪಲ್ಲಿ ತಾಲೂಕಿನ ಚೇಳೂರಿನ ರೆಡ್ಡಪ್ಪ (42). ಇವರು ಫೇಸ್ ಬುಕ್ ಜಾಲಾಡುತ್ತಿದ್ದಾಗ ಬ್ಯಾಂಕಿನಲ್ಲಿ ಸಾಲ ಸಿಗುವ ಮಾಹಿತಿಯನ್ನು ನೋಡಿದ ತಕ್ಷಣ ಅದರಲ್ಲಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ, ವ್ಯಾಪಾರಕ್ಕಾಗಿ 5 ಲಕ್ಷ ರೂ ಸಾಲ ಅಗತ್ಯವಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಕುರಿ ಹಳ್ಳಕ್ಕೆ ಬಿತ್ತು ಎಂದುಕೊಂಡ ಚಾಲಾಕಿ  ಖದೀಮರು  ಪಾನ್ ಕಾರ್ಡ್ , ಆಧಾರ್ ಕಾರ್ಡ್ , ಪಾಸ್ ಪೋರ್ಟ್ , ಭಾವಚಿತ್ರ ಸೇರಿ ಇತರೆ ದಾಖಲೆಗಳ ನಕಲು ಪ್ರತಿಗಳನ್ನು ಹಾಕಿಸಿಕೊಂಡು, ಹಂತ ಹಂತವಾಗಿ ಅಫ್ರೋವಲ್ ನ  ಸುಳ್ಳು ದಾಖಲೆಗಳ ಮೂಲಕ ಬ್ಯಾಂಕ್ ಖಾತೆಗೆ ಹಣ ಪಡೆದುಕೊಂಡಿದ್ದಾರೆ.

ಮೊದಲು 2.50 ಲಕ್ಷ ರೂ ಬ್ಯಾಂಕ್ ಖಾತೆ ಜಮಾಗೊಳಿಸಲು 14,560 ರೂ, 5 ಲಕ್ಷ ರೂಗಳಿಗೆ ಇನ್ಸೂರೆನ್ಸ್ ಪಾಲಸಿ ಚಾರ್ಜಸ್ ಅಂತಾ 19,830, ಎರಡು ತಿಂಗಳ ಮುಂಗಡ ಇಎಂಐ 22,656 ಸೇರಿ 61.670 ರೂಗಳನ್ನು ಪಡೆದುಕೊಳ್ಳಲಾಗಿದೆ. ಇದೇ ವೇಳೆ ಕರಾರು ಪತ್ರ, ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಚೆಕ್ ಸೇರಿ ಹಲವು ನಕಲಿ ದಾಖಲೆಗಳನ್ನು ಹಾಕಲಾಗಿದೆ. ಆದರೆ, ಹಣ ಖಾತೆಗೆ ಬಾರದ ಹಿನ್ನೆಲೆಯಲ್ಲಿ ರೆಡ್ಡಪ್ಪ ಅನುಮಾನಗೊಂಡು ಮಾಹಿತಿ ಕಲೆ ಹಾಕಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.  

ಈಗಾಗಲೇ ಫೇಸ್ ಬುಕ್ ನಲ್ಲಿ  ಪೊಲೀಸ್, ಕಂದಾಯ ಸೇರಿ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಹಲವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಹಣ ಪಡೆದುಕೊಂಡಿರುವ ವಂಚನೆಯ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿವೆ. ಇದರ ನಡುವೆ ಉತ್ತಮ ಸೇವೆಯ ಆಸೆಯನ್ನು ತೋರಿಸಿ, ಹಣ ಲಪಟಾಯಿಸಲಾಗುತ್ತಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಲು ಜಾಗೃತಿ ಮೂಡಿಸುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ನಿರಂತರವಾಗಿ ವಂಚನೆಗೊಳಗಾಗುತ್ತಲೇ ಇದ್ದಾರೆ.