ನ್ಯೂಸ್

ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ನಗರದಲ್ಲಿ ಮೊದಲ ಸಾರ್ವಜನಿಕ ಫುಟ್‌ಬಾಲ್ ಕ್ರೀಡಾಂಗಣ ಶೀಘ್ರವೇ ತಲೆ ಎತ್ತಲಿದ್ದು, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಕ್ರೀಡಾಂಗಣ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಚಾಮುಂಡಿ ವಿಹಾರ ಕ್ರೀಡಾಂಗಣದ ಪಕ್ಕದ ಸಾಯಿಬಾಬಾ ದೇವಸ್ಥಾನ ಹಿಂಭಾಗದಲ್ಲಿರುವ 3.4 ಎಕರೆ ಜಾಗದಲ್ಲಿ 69.75 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಫುಟ್‌ಬಾಲ್ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರಕಲಿದೆ. ವರ್ಷಪೂರ್ತಿ ಫುಟ್‌ಬಾಲ್ ಟೂರ್ನಿಗಳನ್ನು ಆಯೋಜಿಸಲು ನೆರವಾಗಲಿದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ 25 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೂ ತನ್ವೀರ್ ಸೇಠ್ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಹಲವು ಸಮಸ್ಯೆ ಇವೆ. ಆ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಶೌಚಗೃಹದ ಸಮಸ್ಯೆ ಕೂಡ ಇದೆ. ಶಾಸಕರ ಅನುದಾನದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣಕ್ಕೆ ಚಾಲನೆ ನೀಡ್ತೀದ್ದೇವೆ. ಪ್ರತಿ ಕ್ರೀಡೆಗೂ ಮೈಸೂರು ವಿವಿ ಮೈದಾನಗಳ ಮೇಲೆ ಅವಲಂಬಿತವಾಗಿದ್ದೇವೆ. ಇಲ್ಲಿಯೂ ಫುಟ್‌ಬಾಲ್ ಮೈದಾನ ನಿರ್ಮಾಣ ಮಾಡಬೇಕು ಎಂದು ಒತ್ತಡ ಇತ್ತು. ಹಾಗಾಗಿ, ಇಲ್ಲೂ ಮೈದಾನ ಮಾಡುತ್ತಿದ್ದೇವೆ ಎಂದರು.

ಇನ್ನಷ್ಟು ಪಂದ್ಯಾವಳಿ ಆಯೋಜಿಸಲು ಅನುಕೂಲ:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮಾತನಾಡಿ, ಸಾರ್ವಜನಿಕ ಬಳಕೆಗಿರುವ ಜಿಲ್ಲೆಯ ಪ್ರಥಮ ಫುಟ್‌ಬಾಲ್ ಮೈದಾನ ಇದಾಗಲಿದೆ. ಜಿಲ್ಲೆಯ ಆಟಗಾರರಿಗೆ ಇನ್ನಷ್ಟು ಪಂದ್ಯಾವಳಿ ಆಯೋಜಿಸಲು ಅನುಕೂಲವಾಗುತ್ತದೆ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಸತ್ಯರಾಜ್, ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎಲ್.ಮಂಜುನಾಥ್ ಸೇರಿದಂತೆ ಇತರರಿದ್ದರು.