ನ್ಯೂಸ್

ಫಸಲ್ ಬಿಮಾ ಯೋಜನೆಗೆ ನೋಂದಣಿ

ಆಲೂರು: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ನೋಂದಾಯಿಸಿಕೊಳ್ಳಬಹುದು.

ತಾಲೂಕಿನಲ್ಲಿ ರೈತರು ಬೆಳೆಯುವ ಮುಸುಕಿನ ಜೋಳ, ಭತ್ತ ಮತ್ತು ರಾಗಿ ಬೆಳೆಗಳಿಗೆ ರೈತರು ಅರ್ಜಿಯೊಂದಿಗೆ ಭೂಮಿ ದಾಖಲೆಗಳಾದ ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.

ಪ್ರತಿ ಎಕರೆಗೆ ರೈತರು ಆಲೂಗಡ್ಡೆ (ಮಳೆಯಾಶ್ರಿತ) 1462 ರೂ., ಬೆಳೆಗೆ ನೋಂದಾಯಿಸಲು ಜುಲೈ 15 ಅಂತಿಮ ದಿನ. ಮುಸುಕಿನ ಜೋಳ (ಮಳೆಯಾಶ್ರಿತ) 457ರೂ., ಭತ್ತ (ಮಳೆಯಾಶ್ರಿತ) 516 ರೂ.ಬೆಳೆಗೆ ನೋಂದಾಯಿಸಲು ಜುಲೈ 31 ಕೊನೆಯ ದಿನ. ಭತ್ತ (ನೀರಾವರಿ) 755ರೂ., ರಾಗಿ(ಮಳೆಯಾಶ್ರಿತ) 344 ರೂ. ಪಾವತಿಸಿ ಆಗಸ್ಟ್ 16ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ಬೆಳೆ ವಿಮಾ ಸಂಸ್ಥೆ, ಕೃಷಿ ಇಲಾಖೆ/ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಇಲಾಖೆ ಹಾಗೂ ಬೆಳೆ ಸಾಲ ನೀಡುವ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು.