ನ್ಯೂಸ್

ಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡಿ: ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಕರೆ, ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಲೋಕೋತ್ಸವ ಉದ್ಘಾಟನೆ

ರಾಮನಗರ: ಕಲಾವಿದರು ಫಲಾಪೇಕ್ಷೆ, ನಿರೀಕ್ಷೆಗಳಿಲ್ಲದೆ ಸೇವೆ ಮಾಡಿದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.

ಜಾನಪದ ಲೋಕದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ದಕ್ಷಿಣ ವಲಯ, ತಂಜಾವೂರು, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಕೆಎಂಎಫ್ ಹಾಗೂ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರವಾಸಿ ಜಾನಪದ ಲೋಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ಕಲಾವಿದರಿಗೆ ಮಾತೃವಾತ್ಸಲ್ಯ ತೋರುತ್ತಿದ್ದರು. ಸಣ್ಣ ಕಲಾವಿದರಾಗಿದ್ದ ನಮ್ಮನ್ನು ಬೆಂಗಳೂರಿಗೆ ಕರೆದು ವೇದಿಕೆಯಲ್ಲಿ ಕಲಾ ಪ್ರದರ್ಶನ ಮಾಡಲು ಅವಕಾಶ ಕೊಟ್ಟು ಬೆಂಗಳೂರಿನ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸಿ ಕಳುಹಿಸಿದ್ದನ್ನು ನೆನಪಿಸಿಕೊಂಡರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಜಾನಪದ ಲೋಕ ಕಲಾವಿದರ ಕಾಶಿ ಎಂದು ಗುರುತಿಸಿಕೊಂಡಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂಬುದೇ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮುಂದುವರಿಸುತ್ತಿದೆ. ಆದರೆ ಪ್ರಸ್ತುತ ಕೆಲವು ದುಷ್ಟಶಕ್ತಿಗಳ ಕಣ್ಣು ಜಾನಪದ ಲೋಕದ ಮೇಲೆ ಬಿದ್ದಿದೆ. ಅಂತಹ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಜಾನಪದ ಲೋಕಕ್ಕಿದೆ ಎಂದರು.

ಜಾನಪದ ಲೋಕ ಬೆಳೆಯಲು ಹಲವಾರು ಗಣ್ಯರ ಶ್ರಮವಿದೆ. ಈ ಹಿಂದೆ ಜಾನಪದ ಲೋಕ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದ್ದ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಜಾನಪದ ಲೋಕ ಕಟ್ಟಿ, ಹಲವಾರು ಕಲಾವಿದರಿಗೆ ನೆರವಾಗಿದ್ದರು ಎಂದು ಸ್ಮರಿಸಿಕೊಂಡರು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಜಾನಪದ ಲೋಕ ಪ್ರೇಕ್ಷಕರಿಗೆ ಹೊಸ ಜಗತ್ತನ್ನು ತೆರೆದುಕೊಟ್ಟಿದೆ. ಜನಪದದತ್ತ ವಾಲುತ್ತಿರುವವರಿಗೆ ವೇದಿಕೆ ಕಲ್ಪಿಸುವ ಕೆಲಸ ಆಗಬೇಕಿದೆ. ಜಾನಪದ ಲೋಕ ಇಂತಹ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ರಂಜನೆ, ಜನರಿಗೆ ಸಂಸ್ಕೃತಿ, ಯುವಕರಿಗೆ ಜನಪದ ಮೇಲಿನ ಆಸಕ್ತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಮಾತನಾಡಿ, ಚರ್ಮ ವಾದ್ಯಗಳಿಂದ ಹೊರ ಹೊಮ್ಮುವ ನಾದ ವಿಶಿಷ್ಟವಾಗಿದೆ. ಅದನ್ನು ಯುವಜನತೆ ರೂಢಿ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಆದಿ ಚುಂಚನಗಿರಿಯ ಶಾಖಾ ಮಠದ ಕೃಪಾನಂದ ಸ್ವಾಮೀಜಿ ಮಾತನಾಡಿದರು.

ಜಾನಪದ ಅಕಾಡೆಮಿ ಸದಸ್ಯ ಜೋಗಿಲ ಸಿದ್ದರಾಜು, ಕ್ಯೂರೇಟರ್ ಡಾ.ಯು.ಎಂ.ರವಿ, ರಂಗಸಹಾಯಕ ಪ್ರದೀಪ್, ಜನಪದ ಗಾಯಕ ನರಸಿಂಹಮೂರ್ತಿ, ಸಾಹಿತಿ ಹಿ.ಚಿ.ಬೋರಲಿಂಗಯ್ಯ, ನಿರೂಪಕಿ ಅರ್ಚನಾ ಇತರರು ಉಪಸ್ಥಿತರಿದ್ದರು.
ದಶಕಗಳ ಹಿಂದೆ ಲಿಂಗತ್ವ ಅಲ್ಪಸಂಖ್ಯಾತರ ತಂಡ ಕಟ್ಟಿಕೊಂಡು ಕಲಾ ಪ್ರದರ್ಶನ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಪ್ರಶಸ್ತಿ, ಹಣ, ಖ್ಯಾತಿ ಸೇರಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಕಲಾ ಪ್ರದರ್ಶನ ಮಾಡುವುದಷ್ಟೇ ಮುಖ್ಯವಾಗಿತ್ತು. ಕಲಾ ಪ್ರೇಮಿಗಳು ಮತ್ತು ಸರ್ಕಾರ ನನ್ನನ್ನು ಗುರುತಿಸಿ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಮಾತಾ ಬಿ.ಮಂಜಮ್ಮ ಜೋಗತಿ, ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ.

ರಂಜಿಸಿದ ಜಾನಪದ ಕಲೆಗಳು: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಅಧ್ಯಕ್ಷ ಟಿ. ತಿಮ್ಮೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮತ್ತು ಗಣ್ಯರನ್ನು ವೇದಿಕೆಗೆ ಜನಪದ ಕಲಾ ಮೇಳದೊಂದಿಗೆ ಕರೆ ತರಲಾಯಿತು. ವೇದಿಕೆಯಲ್ಲಿ ಪೂಜಾಕುಣಿತ, ತಮಟೆವಾದನ ಸೇರಿ ಹಲವಾರು ಜನಪದ ಕಲೆಗಳು ಪ್ರೇಕ್ಷಕರನ್ನು ರಂಜಿಸಿದವು.

ಕರಕುಶಲ ಮೇಳ: ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕರಕುಶಲ ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಚಾಲನೆ ನೀಡಿದರು. ವಿವಿಧ ರೀತಿಯ 21 ಕರಕುಶಲ ಅಂಗಡಿ ಮಳಿಗೆಗಳು ಇದ್ದವು.

ಆರೋಗ್ಯ ಶಿಬಿರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಲಾವಿದರಿಗೆ ಮತ್ತು ಜನರಿಗೆ ಆರೋಗ್ಯ ಶಿಬಿರ ನಡೆಯಿತು. ಇದೇ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರು ಆರೋಗ್ಯ ಪರೀಕ್ಷಿಸಿಕೊಳ್ಳುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.

ಹಳ್ಳಿಯ ನೈಜ ವಾತಾವರಣ ಅನಾವರಣ: ಸ್ಥಳೀಯ ಕಲಾವಿದರಿಂದ ಪೂಜಾ ಕುಣಿತ, ತಮಟೆ ವಾದ್ಯ ಸೇರಿ ಇತರ ಕಲೆಗಳು ಪ್ರೇಕ್ಷಕರನ್ನು ರಂಜಿಸಿದವು. ವಿಶೇಷವಾಗಿ ಗ್ರಾಮೀಣ ಪರಿಸರದಲ್ಲಿ ಕಾಣಬಹುದಾದ ಬಳೆಗಾರ, ಉರುಮೆ (ಪೆಟ್ಟಿಗೆ ಮಾರಮ್ಮ) ಕಲಾವಿದರು, ದಾಸಪ್ಪ-ಜೋಗಯ್ಯ, ಬುಡಬುಡಕೆಯವರು, ಹಚ್ಚೆ ಕಲಾವಿದರು, ತಂಬೂರಿ, ಏಕತಾರಿ, ಸೋಬಾನೆ ಕಲಾವಿದರು ಹಳ್ಳಿ ನೈಜ ವಾತಾವರಣ ಅನಾವರಣ ಮಾಡಿದರು. ಸಂಜೆ ಜನಪದ ವೈಭವ ಕಾರ್ಯಕ್ರಮ ನಡೆಯಿತು. ಕೆರೆಮನೆ ಶಿವಾನಂದ ಹೆಗಡೆ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.