ಭೋವಿ ಅಭಿವೃದ್ಧಿ ನಿಗಮದ ಸವಲತ್ತು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಶಿವಯೋಗಿ ಸಿದ್ದರಾಮೇಶ್ವರ ಮತ್ತು ಜಸ್ಮಾದೇವಿ ವಿಶ್ವಭೋವಿ ಪಂಚಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಆರೋಪಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಾಲ್ಕು ಸಾವಿರ ಸಂಖ್ಯೆಯಲ್ಲಿ ಭೋವಿ ಸಮುದಾಯದವರು ಕನ್ನಂಬಾಡಿ ಕಟ್ಟಲು ಇಲ್ಲಿಗೆ ವಲಸೆ ಬಂದು ನೆಲೆಸಿದ್ದಾರೆ. ಬಳಿಕ ಜೆಸಿಬಿಯಂತಹ ಯಾಂತ್ರೀಕರಣ, ಕ್ವಾರೆಗಳು ಇತರರ ಪಾಲಾಗಿರುವುದರಿಂದಾಗಿ ಇವರು ನೆಲೆ ಕಳೆದುಕೊಂಡಿದ್ದಾರೆ. ಆದರೆ, ಇವರ ಅಭಿವೃದ್ಧಿಗಾಗಿ ರಚಿಸಿರುವ ಭೋವಿ ಅಭಿವೃದ್ಧಿ ನಿಗಮದ ಸವಲತ್ತು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಭಿವೃದ್ಧಿ ನಿಗಮದ ಹಣವೆಲ್ಲ ಜನಪ್ರತಿನಿಧಿಗಳು ಹಾಗೂ ಕೆಲ ಸ್ವಾಮೀಜಿಗಳ ಪಾಲಾಗುತ್ತಿದೆ. ಹೀಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ನಿಜವಾದ ಫಲಾನುಭವಿಗಳಿಗೆ ಸವಲತ್ತು ದೊರಕುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.