ಬೆಂಗಳೂರು: ಪ್ಲಾಸ್ಟಿಕ್ ಉದ್ಯಮವನ್ನು ಸಂರಕ್ಷಿಸಲು ನಿಯಂತ್ರಣ ಪ್ರಾಧಿಕಾರ ರಚಿಸಬೇಕು ಎಂದು ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
5 ತಿಂಗಳಲ್ಲಿ ಪಿವಿಸಿ, ಎಬಿಎಸ್, ಪಾಲಿಪ್ರೊಪಲೀನ್, ಪಿಸಿ ಹಾಗೂ ಪಿಇಟಿ ಸೇರಿ ಇನ್ನಿತರ ಕಚ್ಛಾವಸ್ತುಗಳ ಬೆಲೆ ಶೇ.20ರಿಂದ ಶೇ.140 ಹೆಚ್ಚಿದೆ. ಇದರಿಂದ ಪ್ಲಾಸ್ಟಿಕ್ ಮತ್ತು ಸಂಸ್ಕರಣ ಉದ್ಯಮ ಕುಸಿಯುವಂತಾಗಿದೆ. ಅಲ್ಲದೆ, ಆ್ಯಂಟಿ ಡಂಪಿಂಗ್ ಡ್ಯೂಟಿ ಹಾಗೂ ಕಡ್ಡಾಯವಾಗಿ ಬಿಐಎಸ್ ಮಾನದಂಡ ಹೇರುವುದನ್ನು ನಿಲ್ಲಿಸಬೇಕು, ಕಚ್ಛಾವಸ್ತುವಿನ ರ್ತು ನಿಷೇಧಿಸಬೇಕು. ಇದರಿಂದ ಚೀನಾದಂತಹ ದೇಶಗಳ ಜತೆ ಸ್ಪರ್ಧೆ ನಡೆಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸಂಘದ ಹತ್ತು ರಾಜ್ಯ ಶಾಖೆಗಳು ಮನವಿ ಮಾಡಿದರು.
ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಕೈಗಾರಿಕೆಗಳಿವೆ. ಶೇ.90 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಾಗಿವೆ. ಈ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ 3 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತಿದೆ. ಆದರೆ, ಮನುಕುಲವನ್ನೇ ಕಾಡುತ್ತಿರುವ ಕರೊನಾದಿಂದ ಈ ಕ್ಷೇತ್ರದ ಆರ್ಥಿಕತೆ ಕುಸಿದಿದೆ. ಆದ್ದರಿಂದ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪೆಟ್ರೋ ಕೆಮಿಕಲ್ ಉದ್ಯಮದಲ್ಲಿ ಅನಗತ್ಯ ಲಾಭದಾಯಕತೆ ನಿಯಂತ್ರಿಸಲು ಪ್ರಾಧಿಕಾರ ಅಗತ್ಯವಿದೆ ಎಂದು ರಾಜ್ಯ ಪ್ಲಾಸ್ಟಿಕ್ ಉತ್ಪಾದಕರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್ ತಿಳಿಸಿದ್ದಾರೆ.