ಬೆಟ್ಟದಪುರ: ವರ್ಗಾವಣೆಗೊಂಡಿರುವ ಶಿಕ್ಷಕ ವಿ.ಮೋಹನ್‌ಕುಮಾರ್ ಅವರನ್ನು ಮತ್ತೆ ಕಣಗಾಲು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಮರು ವರ್ಗಾಯಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಡಿಡಿಪಿಐ ಎಚ್.ಕೆ ಪಾಂಡು ಅವರಿಗೆ ಬುಧವಾರ ಮೈಸೂರಿನಲ್ಲಿ ಮನವಿ ಸಲ್ಲಿಸಿದರು.
ಮೋಹನ್‌ಕುಮಾರ್ ಕಣಗಾಲು ಪ್ರೌಢಶಾಲೆಯ ಹೆಚ್ಚುವರಿ ಪಟ್ಟಿಯಲ್ಲಿದ್ದ ಕಾರಣ ಅವರನ್ನು ಇಲಾಖೆ ಸಮೀಪದ ಬೆಟ್ಟದತುಂಗ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿದೆ. ಇದೀಗ ನೆಚ್ಚಿನ ಶಿಕ್ಷಕನನ್ನು ಹಳೇ ಶಾಲೆಗೆ ಮರು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದನಾಯ್ಕ, ಪಾಲಕರಾದ ಪುಟ್ಟರಾಜು, ಕುಮಾರ್, ಸಾಗರ್ ಇದ್ದರು
ಮನವಿ ಸಲ್ಲಿಸಲು ವಿದ್ಯಾರ್ಥಿಗಳನ್ನು ನನ್ನ ಕಚೇರಿಯವರೆಗೂ ಕರೆದುಕೊಂಡು ಬರುವ ಅಗತ್ಯವಿರಲಿಲ್ಲ. ಏನಾದರೂ ಸಮಸ್ಯೆಯಾದರೆ ಶಿಕ್ಷಣ ಇಲಾಖೆ ಹೊಣೆಯಾಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿ ಬರಬಾರದು. ಶಿಕ್ಷಕನ ವರ್ಗಾವಣೆ ವಿಚಾರದಲ್ಲಿ ಶೀಘ್ರ ಕಣಗಾಲು ಶಾಲೆಗೆ ಭೇಟಿ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು.
ಎಚ್.ಕೆ ಪಾಂಡು ಡಿಡಿಪಿಐ, ಮೈಸೂರು