ಬೆಂಗಳೂರು: ಪ್ರಾಧ್ಯಾಪಕರೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ರೂಪಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪಿಯನ್ನು ವೈಟ್‌ಫಿಲ್ಡ್ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲದ ವಿಶ್ವನಾಥ್ (40) ಬಂಧಿತ. ಆರೋಪಿಯಿಂದ 2 ಮೊಬೈಲ್ ಜಪ್ತಿ ಮಾಡಲಾಗಿದ್ದು, 25ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳು ಪತ್ತೆಯಾಗಿವೆ ಎಂದು ವೈಟ್‌ಫೀಲ್ಡ್ ಡಿಸಿಪಿ ದೇವರಾಜು ತಿಳಿಸಿದ್ದಾರೆ.
ಅಸ್ಸಾಂ ಮೂಲದವನಾದ ವಿಶ್ವನಾಥ್ ಚಿಕ್ಕಜಾಲದಲ್ಲಿ ನೆಲೆಸಿದ್ದು, ಕೋಳಿಫಾರಂ ನಡೆಸುತ್ತಿದ್ದ. ವ್ಯಾಟ್ಸ್‌ಆ್ಯಪ್ ಗ್ರೂಪ್‌ವೊಂದರ ಮೂಲಕ ಪ್ರಾಧ್ಯಾಪಕ ಯಲ್ಲಪ್ಪ ಅವರ ಫೋಟೋಗಳನ್ನು ಸಂಗ್ರಹಿಸಿದ್ದ. ಅವುಗಳನ್ನು ಅಶ್ಲೀಲವಾಗಿ ರೂಪಿಸಿ, ಯಲ್ಲಪ್ಪನ ವ್ಯಾಟ್ಸ್‌ಆ್ಯಪ್‌ಗೆ ರವಾನಿಸಿದ್ದ. ಬಳಿಕ ಕರೆ ಮಾಡಿ ವ್ಯಾಟ್ಸ್‌ಆ್ಯಪ್ ಪರಿಶೀಲಿಸಿಕೊಳ್ಳುವಂತೆ ತಿಳಿಸಿದ್ದ. 70 ಸಾವಿರ ರೂ. ಕೊಡಬೇಕು. ಹಣ ನೀಡದಿದ್ದರೆ ಫೋಟೋಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಬಂಧಿಸಲಾಗಿದೆ.
ಆರೋಪಿಯ ಬಳಿ ಇದ್ದ 2 ಮೊಬೈಲ್‌ಗಳನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ, ಮೂರ‌್ನಾಲ್ಕು ಗ್ರೂಪ್‌ಗಳಲ್ಲಿನ ಸದಸ್ಯರ ಫೋಟೋಗಳನ್ನು ಸಂಗ್ರಹಿಸಿ ಅಶ್ಲೀಲವಾಗಿ ರೂಪಿಸಿರುವುದು ಕಂಡು ಬಂದಿದೆ. ಪರಿಚಯಸ್ಥರ ಮೂಲಕ ವ್ಯಾಟ್ಸ್‌ಆ್ಯಪ್ ಗ್ರೂಪ್ ಸೇರಿಕೊಂಡು ಕೃತ್ಯ ಎಸಗುತ್ತಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.