ನ್ಯೂಸ್

ಪ್ರಾದೇಶಿಕ ಅಸಮತೋಲನ ನಿವಾರಣೆ / ಸೆಪ್ಟೆಂಬರ್ ವೇಳೆಗೆ ಸರ್ಕಾರಕ್ಕೆ ಶಿಫರಸು ವರದಿ ಸಲ್ಲಿಕೆ / ಪ್ರೊ. ಗೋವಿಂದರಾವ್

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಾದ್ಯಂತ ಮಾಹಿತಿ ಸಂಗ್ರಹಿಸಿ ಮುಂದಿನ ಸೆಪ್ಟೆಂಬರ್ ವೇಳೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಶಿಫಾರಸು ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ ಎಂ.ಗೋವಿAದ ರಾವ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆ ಹಾಗೂ ಸಾರ್ವಜನಿಕ ಶಿಫಾರಸು ಸ್ವೀಕಾರದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ೨೦೦೨ರಲ್ಲಿ ಡಾ.ಡಿ.ಎಂ.ನAಜುAಡಪ್ಪ ಅವರು ೩೫ ಸೂಚ್ಯಂಕ ಪರಿಶೀಲಿಸಿ ೧,೨೦೦ ಪುಟಗಳ ವರದಿಯನ್ನು ಅಂದಿನ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯಲ್ಲಿ ರಾಜ್ಯದ ಭೂ ಭಾಗವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿತ್ತು. ಈ ವಿಭಾಗಗಳ ಪೈಕಿ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು, ೪೦ ಅತಿ ಹಿಂದುಳಿದ ತಾಲ್ಲೂಕುಗಳು ಹಾಗೂ ೩೫ ಹಿಂದುಳಿದ ತಾಲ್ಲೂಕು ಎಂದು ಗುರುತಿಸಿ ಒಟ್ಟು ೧೧೪ ತಾಲ್ಲೂಕುಗಳ ಅಭಿವೃದ್ಧಿಗೆ ೩೧ ಸಾವಿರ ಕೋಟಿ ವಿಶೇಷ ಅನುದಾನ ವಿನಿಯೋಗಿಸಬೇಕು. ಜೊತೆಗೆ ಅಸಮಾನತೆ ನಿವಾರಣೆಯಲ್ಲಿ ಹಲವು ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಲಾಗಿತ್ತು.

ಈಗಾಗಲೇ ಬೆಂಗಳೂರು ವಿಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮನವಿ ಹಾಗೂ ಮಾಹಿತಿ ಪಡೆಯಲಾಗಿದೆ. ಜತೆಗೆ ಲಿಖಿತವಾಗಿಯೂ ಏನಾದರೂ ಅಹವಾಲು, ಸಲಹೆ ಮನವಿ ಇದ್ದರೆ ನೇರವಾಗಿ ಬೆಂಗಳೂರಿನಲ್ಲಿರುವ ಸಮಿತಿ ಕಚೇರಿಗೆ ಕಳುಹಿಸಿಕೊಡಲು ಖುದ್ದಾಗಿ ಸಲ್ಲಿಸಲು ಸಹ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋಲಾರಕ್ಕೆ ನೀರಾವರಿ, ರೇಷ್ಮೆ, ಕೃಷಿ, ತೋಟಗಾರಿಕೆಗೆ ಆದ್ಯತೆ :

ತಲಾದಾಯ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಸೂಚ್ಯಂಕ ಪರಿಗಣಿಸಿ ಮಾಹಿತಿ ಸಂಗ್ರಹಿಸಲಾಗುವುದು. ಕೋಲಾರ ಭಾಗದಲ್ಲಿ ನೀರಾವರಿ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕಾ ಬೆಳೆಗಳ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಉತ್ಪಾದನಾ ಘಟಕಗಳ ಸ್ಥಾಪನೆ, ಶೀತಲ ಘಟಕಗಳ ಸ್ಥಾಪನೆ, ಮಳೆ ಕೊಯ್ಲು, ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಪಶು ಆಹಾರ ದರ ಕಡಿತಕ್ಕೆ, ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಆದ್ಯತೆ ನೀಡುವ ಅಂಶ ವರದಿಯಲ್ಲಿ ಶಿಫಾರಸು ಮಾಡಲಾಗುವುದು. ಬಾಲ್ಯವಿವಾಹ ತಡೆ ನಿಯಂತ್ರಣ ವಿಚಾರವಾಗಿ ಹಲವು ಸಲಹೆ ಹಾಗೂ ಶಿಫಾರಸು ಸ್ವೀಕರಿಸಲಾಗಿದೆ. ಈ ಎಲ್ಲ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಕೋಲಾರ ಸಂಸದ ಮಲ್ಲೇಶಬಾಬು ಮಾತನಾಡಿ, ಜಿಲ್ಲೆಗೆ ಹರಿಸಲಾಗುತ್ತಿರುವ ಕೆ. ಸಿ. ವ್ಯಾಲಿ ನೀರನ್ನು ೩ ಹಂತದಲ್ಲಿ ಶುದ್ಧಿಕರಣಮಾಡದೆ ಕೆರೆಗಳಿಗೆ ಹರಿಯಬಿಡಲಾಗುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ಇಂಗುವ ನೀರು ಕುಡಿಯಲು ಯೋಗ್ಯವಾಗದೆ ಹೋಗುತ್ತಿದೆ. ಅಂತೆಯೇ ಕೃಷಿಗಾಗಿ ಈ ನೀರನ್ನು ಬಳಸಲಾಗುತ್ತಿದೆ. ಆದರೆ ಇಳುವರಿ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಕೃಷ್ಣಾ ನಡಿ ನೀರನ್ನು ಹಾಗೂ ಎತ್ತಿನಹೊಳೆ ಯೋಜನೆಯನ್ನು ಕೋಲಾರ ಜಿಲ್ಲೆಗೆ ಹರಿಸಿದರೆ ಶಾಶ್ವತ ಪರಿಹಾರ ಒದಗಿಸಿದಂತಾಗುವುದು ಎಂದು ಸಲಹೆ ನೀಡಿದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಆರ್.ವಿಶಾಲ್ ಅವರು ಮಾತತನಾಡಿ ಜಿಲ್ಲೆಯಲ್ಲಿ ತಲಾದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು ಕುರಿತು ವಿವರಿಸಿದರು. ಸಂಘ ಸಂಸ್ಥೆಗಳು ಯಾವುದೇ ಸಲಹೆ ಸೂಚನೆ ನೀಡುವುದಿದ್ದಲ್ಲಿ ಖುದ್ದಾಗಿ ಭೇಟಿ ಮಾಡಿ ನೀಡಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಕೆ ಜಿ ಎಫ್ ಪೊಲೀಸ್ ವರಿಷ್ಟಾಧಿಕಾರಿ ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಕೋಲಾರ ತಹಸೀಲ್ದಾರ್ ಡಾ. ನಯನ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನಾಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಶ್ರೀನಿವಾಸನ್,, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಾಲಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಸಂಘಗಳ ಉಪನಿಬಂಧಕರು, ಸರ್ಕಾರೇತರ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.

ಚಿತ್ರ ೦೮ ಕೆ.ಎಲ್.ಆರ್. ೦೪ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ ಎಂ.ಗೋವಿAದ ರಾವ್, ಅಸಮತೋಲನ ನಿವಾರಣೆ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಆರ್.ವಿಶಾಲ್, ಡಿ.ಸಿ. ಎಂ.ಆರ್.ರವಿ, ಸಂಸದ ಮಲ್ಲೇಶ್‌ಬಾಬು ಮುಂತಾದವರು ಇದ್ದರು.