ನ್ಯೂಸ್

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಡಿಡಿಪಿಐ ಮೂಲಕ ಸಿಎಂಗೆ ಮನವಿ / ಬಿಸಿಯೂಟ, ಚಿಕ್ಕಿ, ಮೊಟ್ಟೆ ವಿತರಣೆ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಕೋಲಾರ

ಪ್ರಾಥಮಿಕ ಶಾಲೆಗಳಿಗೆ ಪ್ರತಿದಿನ ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಾದ ಅಕ್ಷರ ದಾಸೋಹ, ಮೊಟ್ಟೆ ವಿತರಣೆ ಕಾರ್ಯಗಳ ಒತ್ತಡದಿಂದಾಗಿ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದ್ದು, ಈ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ಡಿಡಿಪಿಐ, ಬಿಇಒ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಮೂಲಕ ಶನಿವಾರ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಬಿಸಿಯೂಟ, ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು, ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.

ಈ ನಡುವೆ ಬೆಲೆ ಏರಿಕೆಯಿಂದ ಮೊಟ್ಟೆ ವಿತರಣೆ ಶಿಕ್ಷಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹಾಗಾಗಿ ಯೋಜನಾ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಶಾಲಾ ಅನುದಾನ ಬಳಸುವ ಚಕ್ಕರ್ ಮೇಕರ್ ಸರಳಿಕರಣ ಗೊಳಿಸುವಂತೆ ಮನವಿ ಮಾಡಿದರು.

ಚುನಾವಣಾ ಕಾರ್ಯ, ಮತಪಟ್ಟಿ ತಯಾರಿಕೆ, ಗಣತಿ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ನಡುವೆ ಮೊಟ್ಟೆ ಖರೀದಿಸಿ ಅದನ್ನು ಬೇಯಿಸಿ ವಿತರಿಸಲು ತೊಂದರೆಯಾಗಿದೆ. ಮೊಟ್ಟೆ ಬೆಲೆ ಏರಿಕೆಯಿಂದಾಗಿ ಸರ್ಕಾರ ನೀಡುವ ಅನುದಾನ ಸಾಕಾಗುತ್ತಿಲ್ಲ, ಶಿಕ್ಷಕರಿಗೆ ಆರ್ಥಿಕ ಹೊರೆಯೂ ಆಗುತ್ತಿದೆ ಎಂದು ದೂರಿದರು.

ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಬಿಸಿಯೂಟ ಯೋಜನೆಗೆ ನೀಡುತ್ತಿರುವ ಸಾಧಿಲ್ವಾರು ತರಕಾರಿಗೂ ಸಾಕಾಗುವುದಿಲ್ಲ, ಸಾಂಬಾರು ಪುಡಿ, ಈರುಳ್ಳಿ, ಬೆಳ್ಳುಳ್ಳಿ ಎಲ್ಲವನ್ನು ಖರೀದಿಸಲು ಕಷ್ಟವಾಗಿದೆ. ಶಿಕ್ಷಕರೇ ನಿತ್ಯ ಕೈಯಿಂದ ಹಣ ಹಾಕಿ ಖರೀದಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ಸರ್ಕಾರ ಬಿಸಿಯೂಟ ಯೋಜನೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿದರೆ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಬೋಧನೆಯಲ್ಲಿ ತೊಡಗಲು ಸಹಕಾರಿಯಾಗಲಿದೆ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಪ್ಪ, ಖಜಾಂಚಿ ಅಶ್ವಥ್ಥಪ್ಪ, ಸಂಘದ ಪದಾಧಿಕಾರಿಗಳಾಧ ಕೃಷ್ಣಪ್ಪ, ಭಾಗ್ಯಲಕ್ಷ÷್ಮಮ್ಮ, ಮಂಜುಳಾ, ಭಾಗ್ಯಮ್ಮ, ರುದ್ರಮ್ಮ, ರೇಷ್ಮಾ ತಲತ್ ಕಾನಂ, ಸೋಮಶೇಖರ್, ಪಾಪಣ್ಣ, ವೆಂಕಟರಾಮ್, ಇಬ್ರಾಹಿಂ ಖಾನ್ ಮತ್ತಿತರ ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೬ : ಅಕ್ಷರ ದಾಸೋಹ, ಮೊಟ್ಟೆ ವಿತರಣೆ ಕಾರ್ಯಗಳ ಒತ್ತಡದಿಂದಾಗಿ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದ್ದು, ಈ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಕೋಲಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ಡಿಡಿಪಿಐ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.