ಪ್ರತಿ ವರ್ಷವೂ ಮಳೆಗೆ ಬೆಂಗಳೂರಿನ ರಸ್ತೆಗಳು ಅಧ್ವಾನಗೊಳ್ಳುತ್ತವೆ. ಒಂದೆರಡು ಮಳೆಗೇ ರಸ್ತೆಗಳು ಪೂರ್ತಿ ಕಿತ್ತುಹೋಗುವುದರಿಂದ ಅವುಗಳ ‘ಗುಣಮಟ್ಟ’ ಎಂಥದ್ದು ಎಂಬುದನ್ನು ಅಂದಾಜಿಸಬಹುದು. ಈ ವರ್ಷವಂತೂ ಈ ಗುಂಡಿಗಳು ವಾಹನ ಸವಾರರ ಜೀವವನ್ನೇ ಬಲಿ ಪಡೆಯುತ್ತಿದ್ದರೂ, ಅಧಿಕಾರಿಗಳು ಜಡತ್ವದಿಂದ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸೆಪ್ಟೆಂಬರ್ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬಿದ್ದು ಗಾಯ ಮಾಡಿಕೊಂಡ ಘಟನೆಗಳಿಗಂತೂ ಲೆಕ್ಕವೇ ಇಲ್ಲ. ಗುಂಡಿ ಬಿದ್ದ ಬಳಿಕ ಕೂಡಲೇ ಅದನ್ನು ಸರಿಪಡಿಸಬೇಕಾದ ಹೊಣೆಗಾರಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯದ್ದು. ಆದರೆ, ಜನರ ಸಮಸ್ಯೆ, ಅಪಾಯದ ತೀವ್ರತೆ, ಗುಂಡಿಗಳ ದುರಸ್ತಿ ವಿಷಯದಲ್ಲಿ ಅಧಿಕಾರಿಗಳು ಸಂವೇದನಾರಹಿತವಾಗಿ ವರ್ತಿಸುತ್ತಿರುವುದರಿಂದ, ಮತ್ತೊಮ್ಮೆ ನ್ಯಾಯಾಂಗ ಖಡಕ್ ಎಚ್ಚರಿಕೆ ಕೊಟ್ಟಿದೆ. ನಮ್ಮಲ್ಲಿ ಅಭಿವೃದ್ಧಿ ಕಾಮಗಾರಿಯಿಂದ ಹಿಡಿದು ರಸ್ತೆರಿಪೇರಿವರೆಗಿನ ಪ್ರಕರಣಗಳಲ್ಲೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುವುದೇ ಇಲ್ಲ. ಹಾಗಾಗಿ, ನ್ಯಾಯಾಂಗ ಮಧ್ಯಪ್ರವೇಶ ಮಾಡಿ, ಎಚ್ಚರಿಕೆ ನೀಡಬೇಕಾಗುತ್ತದೆ. ಈ ರೀತಿ ಕಿವಿಹಿಂಡಿದ ಬಳಿಕವೇ ಕೆಲಸಕ್ಕೆ ತೊಡಗುವುದು ಅಧಿಕಾರಿಗಳ ‘ಕಾರ್ಯದಕ್ಷತೆ’ಗೆ ಸಾಕ್ಷಿ.
ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಬೂಬು ನೀಡದೆ, ಕಾಲಹರಣ ಮಾಡದೆ ರಸ್ತೆದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಮಸ್ಯೆಯ ತೀವ್ರತೆ ಕಂಡು ದಂಗಾಗಿ ಹೋಗಿರುವ ಹೈಕೋರ್ಟ್, ಬಿಬಿಎಂಪಿಗೆ- ‘ನೀವು ಸಾಲ ಮಾಡುತ್ತೀರೋ, ಕಳ್ಳತನ ಮಾಡುತ್ತೀರೋ ಮೂಲಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಮೊದಲು ಗುಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಸರಿ ಮಾಡಿ, ಮಳೆಯ ನಂತರ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ’ ಎಂದು ಹೇಳಿದೆ. ಅಂದರೆ, ನ್ಯಾಯಾಲಯದ ಸೂಚನೆ ಬರುವ ತನಕ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 13,974 ಕಿಲೋಮೀಟರ್ ರಸ್ತೆ ಜಾಲವಿದೆ. ಈ ಪೈಕಿ ಮುಖ್ಯರಸ್ತೆಗಳು ಮತ್ತು ಉಪ ಮುಖ್ಯರಸ್ತೆಗಳ ಉದ್ದ 1,344 ಕಿ.ಮೀ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆಂದೇ ಕಳೆದ ಐದು ವರ್ಷಗಳಲ್ಲಿ 20,060 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ನಲ್ಲಿ ನೀಡಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದರೂ ರಸ್ತೆಗಳ ನಿರ್ವಹಣೆ ಇಷ್ಟೊಂದು ಕಳಪೆ ಆಗಿರುವುದೇಕೆ? ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೇ ಭೇಟಿ ನೀಡುವುದಿಲ್ಲ, ಸೂಕ್ತ ಮೇಲ್ವಿಚಾರಣೆ ಮಾಡುವುದಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ರಸ್ತೆ ಗುಂಡಿಗಳಿಗೆ ಇನ್ನಷ್ಟು ಪ್ರಾಣಗಳು ಬಲಿಯಾಗುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಳ್ಳಲಿ. ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮತ್ತು ಗುಣಮಟ್ಟದಿಂದ ನಡೆಸುವಂತಾಗಲಿ. ರಾಜ್ಯದ ಇತರ ನಗರಗಳಲ್ಲೂ ಈ ಸಮಸ್ಯೆ ಇದ್ದು ಸಂಬಂಧಪಟ್ಟವರು ಸೂಕ್ತವಾಗಿ ಸ್ಪಂದಿಸಲಿ.