ನ್ಯೂಸ್

ಪ್ರಾಜೆಕ್ಟ್ ಟೈಗರ್ ತರದಿದ್ದರೆ ಹುಲಿ ಸಂತತಿ ಉಳಿಯುತ್ತಿರಲಿಲ್ಲ


ಎಚ್.ಡಿ.ಕೋಟೆ: ಕಾಡಿನ ಆಹಾರ ಸರಪಳಿ ಬಲಿಷ್ಠವಾಗಿರಬೇಕು ಎಂದರೆ ಹುಲಿಗಳು ಉಳಿಯಬೇಕು. ಈ ನಿಟ್ಟಿನಲ್ಲಿ 1973ರಲ್ಲಿ ಇಂದಿರಾ ಗಾಂಧಿ ಅವರು ಪ್ರಾಜೆಕ್ಟ್ ಟೈಗರ್ ತರದಿದ್ದರೆ ಇಂದು ಅವುಗಳ ಸಂತತಿ ಉಳಿಯುವುದೇ ಕಷ್ಟವಾಗುತ್ತಿತ್ತು. ಈ ನಿಟ್ಟಿನಲ್ಲಿ ಅವರ ಕೊಡುಗೆ ಅಪಾರ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.


ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯದ ಕಾಕನಕೋಟೆ ಸಫಾರಿ ಕೇಂದ್ರದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಹುಲಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನನ್ನ ಕ್ಷೇತ್ರದಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳು ಬರುತ್ತವೆ. ಈ ಬಾರಿ ನಾಗರಹೊಳೆ 149 ಹಾಗೂ ಬಂಡೀಪುರದಲ್ಲಿ 143 ಹುಲಿಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಮೊದಲನೇ ಮತ್ತು ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.


ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ 12 ವಲಯಗಳು ಸೇರುತ್ತವೆ. ಬಹುತೇಕ ಕಡೆ ಹುಲಿ ದಾಳಿ, ಆನೆ ದಾಳಿಗಳು ನಡೆಯುತ್ತಿರುತ್ತವೆ. ಆನೆದಾಳಿ ತಡೆಗಟ್ಟಲು ಅರಣ್ಯ ಸಚಿವರಿಗೆ ನಮ್ಮ ಭಾಗಕ್ಕೆ 73 ಕಿ.ಮೀ.ನಷ್ಟು ರೈಲ್ವೆ ಬ್ಯಾರಿಕೇಡ್ ಬೇಕು ಎಂದು ಮನವಿ ಮಾಡಿದ್ದೇನೆ. ಅಲ್ಲದೆ ರೈತರಿಗೂ ಆನೆಗೆ ಪ್ರಿಯವಾದ ಆಹಾರಗಳನ್ನು ಕಾಡಂಚಿನಲ್ಲಿ ಬೆಳಯದಂತೆ ಮನವಿ ಮಾಡಲಾಗಿದೆ ಎಂದರು.


ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಮತ್ತು ಸಾಂದ್ರತೆಯಲ್ಲಿ ನಾಗರಹೊಳೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಹುಲಿಗಳ ರಕ್ಷಣೆ ಅವುಗಳ ಆವಾಸ ಸ್ಥಾನದ ರಕ್ಷಣೆಗೆ ಸ್ಥಳೀಯರ ತಾಳ್ಮೆ ಮತ್ತು ಬೆಂಬಲ ಮುಖ್ಯ. ಅವರ ಸಹಾಯದಿಂದಲೇ ನಾವು ಇಂದು ಹುಲಿಗಳ ರಕ್ಷಿಸಲು ಸಾಧ್ಯವಾಗಿದೆ. ಅಲ್ಲದೆ ಸಿಬ್ಬಂದಿ ಶ್ರಮ ಮತ್ತು ತ್ಯಾಗವನ್ನು ಮರೆಯುವಂತಿಲ್ಲ. ಕಾಡು ನದಿಗಳು ಉಗಮಸ್ಥಳ, ನಮ್ಮ ಮೂಲ ಕಾಡೇ ಆದ್ದರಿಂದ ನಾವೆಲ್ಲ ಕಾಡನ್ನು ರಕ್ಷಣೆ ಮಾಡಬೇಕು ಎಂದರು.


ಇದೇ ವೇಳೆ ವಿಶ್ವ ಹುಲಿದಿನದ ಅಂಗವಾಗಿ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ, 15 ಕಿ.ಮೀ.ಮ್ಯಾರಥಾನ್ ಓಟ, ಆದಿವಾಸಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮಣಿಕಂದನ್ ಅವರ ಹೆಸರಿನಲ್ಲಿ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಗೌರವ ವನ್ಯಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ, ಮಂಜುನಾಥ್, ಎಸಿಎಫ್ ಕೆ.ಎನ್.ರಂಗಸ್ವಾಮಿ, ಆರ್‌ಎಫ್‌ಒಗಳಾದ ಸಿದ್ದರಾಜು, ಮಧು, ಡಿ.ಎಸ್.ದಯಾನಂದ್, ಸುರಾನಾ ಕಾಲೇಜು ಪ್ರಾಂಶುಪಾಲ ಕಾರ್ತೀಕ್ ಕೃಷ್ಣನ್, ನೆಟ್‌ಜಿಯೋ ಫೆಲೋ ಸಂದೇಶ್ ಕಡೂರ್, ಪೊಲೀಸ್ ಇಲಾಖೆಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.