ನ್ಯೂಸ್

ಪ್ರಾಚೀನ ಸಾಹಿತ್ಯದ ಮರುಅಧ್ಯಯನ ಅಗತ್ಯ

ಆಧುನಿಕ ಕನ್ನಡ ಸಾಹಿತ್ಯವು ಪರಂಪರೆಯಿಂದ ಗಟ್ಟಿಗೊಳಿಸಿಕೊಳ್ಳಬೇಕಾಗಿದೆ. ಇಂದು ಅಧಿಕಾರದ ಹಂಬಲ ಭೋಗದ ಆಸಕ್ತಿ ಹೆಚ್ಚಿದೆ, ಹಾಗಾಗಿ ಪ್ರಾಚೀನ ಕನ್ನಡ ಸಾಹಿತ್ಯದ ಮರುಅಧ್ಯಯನ ಅಗತ್ಯ ಇದೆ ಎಂದು ನಾಡಿನ ಬಹುಮುಖಿ ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಪಂಪನ ಕಾವ್ಯಗಳು ಪುನರಾವಲೋಕನ’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಮನುಷ್ಯನನ್ನು ಅಧಿಕಾರ ಮತ್ತು ಭೋಗಗಳು ಇನ್ನಿಲ್ಲದಂತೆ ಕಾಡುವ ಎರಡು ಶಕ್ತಿಗಳಾಗಿವೆ. ಸುಖದ ಬೆನ್ನು ಹತ್ತಿ ಹೋಗುತ್ತಿರುವುದು ವಸಾಹತುಶಾಹಿಯ ಬಳುವಳಿಯಾಗಿದೆ. ಪಂಪನ ಕಾವ್ಯಗಳು ಹಾಗೂ ಹಳೆಗನ್ನಡ ಸಾಹಿತ್ಯವು ಸ್ವಾಯತ್ತ ಪ್ರಜ್ಞೆಯನ್ನು ಕಲಿಸುತ್ತದೆ, ಬದುಕನ್ನು ಪ್ರೀತಿಸುವ ಶಕ್ತಿಯನ್ನು ದಯಪಾಲಿಸುತ್ತದೆ. ಅಹಂಕಾರ ಮತ್ತು ಅಧೀನ ಭಾವವನ್ನು ರೂಢಿಸಿಕೊಳ್ಳದೆ ಉತ್ತಮ ಜೀವನ ಪ್ರೀತಿಯನ್ನು ಮೈಗೂಡಿಸಿಕೊಳ್ಳಬೇಕು. ಈ ಕಾರಣಕ್ಕಾಗಿ ಪಂಪನ ಕಾವ್ಯಗಳ ಮರುಅಧ್ಯಯನ ತುರ್ತು ಅಗತ್ಯ ಎಂದು ತಿಳಿಸಿದರು.

ಚಿಂತಕ ಡಾ.ಜಿ.ಪಿ ಹರೀಶ್ ಮಾತನಾಡಿ, ಪಂಪನ ಕಾವ್ಯಗಳ ಚರಿತ್ರೆಯಲ್ಲಿ ನೋಡುವ ಹೊಸ ಹೊಳಹುಗಳಿವೆ. ಪಂಪನ ಕಾಲಕ್ಕಿಂತ ಹಿಂದೆ ಕನ್ನಡ ಕವಿಗಳು ಇದ್ದರೂ ಅವನ ಕೃತಿಗಳ ರಚನೆಯಲ್ಲಿ ಪ್ರಾಕೃತ ಹಾಗೂ ಸಂಸ್ಕೃತಗಳ ಪ್ರಭಾವವಿದೆ. ಮಾನವೀಯ ನೆಲೆಯಲ್ಲಿ ಯೋಚಿಸುವ ಪಂಪ, ತನ್ನ ಕಾವ್ಯದಲ್ಲಿ ಯುದ್ಧದ ಕಾದಾಟದಲ್ಲಿ ಸಮಾಜವನ್ನು ಬಲಿ ಕೊಡಬಾರದು ಎನ್ನುವ ಜೀವನ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾನೆ. ಪಂಪನನ್ನು ಓದುವುದೆಂದರೆ ಪರಂಪರೆಯನ್ನು ಅರ್ಥೈಸಿಕೊಂಡಂತೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ಕಾವ್ಯಗಳು ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತವೆ. ನಮ್ಮ ಪ್ರಾಚೀನ ಕಾವ್ಯಗಳು ಅತ್ಯಂತ ಮೌಲಿಕವಾಗಿವೆ, ಆಧುನಿಕ ಕಾಲದಲ್ಲಿ ಪಂಪನ ಕಾವ್ಯಗಳನ್ನು ಅಧ್ಯಯನ ಮಾಡುವುದು ಮುಖ್ಯವಾಗಿದೆ. ಪರಂಪರೆಯನ್ನು ಉಳಿಸುವ ಬೆಳೆಸುವ ಕಾರ್ಯ ಇಂದಿನ ಓದುಗರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರಾಂಶುಪಾಲ ಡಾ.ರೇಚಣ್ಣ, ಕರಾಮುವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಗೀತಾಂಜಲಿ ಇದ್ದರು.