ನಗರದ ಮಹಾರಾಜ ಮತ್ತು ಯುವರಾಜ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳಿಗೆ ನೇಮಕಾತಿಗಾಗಿ ಮೀಸಲಾತಿ ಅನುಸರಿಸದೆ, ಇನ್ನಿತರ ನಿಯಮಗಳನ್ನು ಗಾಳಿಗೆ ತೂರಿ ಮೈಸೂರು ವಿವಿ ಅರ್ಜಿ ಆಹ್ವಾನಿಸಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು.
ನೇಮಕಕ್ಕೆ ಮೈಸೂರು ವಿವಿ ಹೊರಡಿಸಿರುವ ಪ್ರಕಟಣೆ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ನಿರ್ಲಕ್ಷಿಸಿ, ಕಾನೂನು ಬಾಹಿರವಾಗಿದೆ. ಹೀಗಾಗಿ ತಾವು ರಾಜ್ಯಪಾಲರು, ಶಿಕ್ಷಣ ಇಲಾಖೆ ಮೊದಲಾದವಕ್ಕೆ ಮನವಿ ಸಲ್ಲಿಸಿ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮೈಸೂರು ವಿವಿಯ ಈ ಕೆಲಸ ಉನ್ನತ ಶಿಕ್ಷಣಕ್ಕೆ ಅಗೌರವ ತರುವಂತದ್ದಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಮೈಸೂರು ವಿವಿಯಲ್ಲಿ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ವಿವಿ ಸಂಜೆ ಕಾಲೇಜು, ಲಲಿತ ಕಲಾ ಕಾಲೇಜುಗಳೆಂಬ 4 ಕಾಲೇಜುಗಳು ಇವೆ. ಆದರೆ, ಇವುಗಳಲ್ಲಿ ಎರಡಕ್ಕೆ ಮಾತ್ರ ಪ್ರಕಟಣೆ ಹೊರಡಿಸಿದ್ದು, ಉಳಿದವಕ್ಕೆ ಏಕೆ ಹೊರಡಿಸಿಲ್ಲ. ಈ ಪ್ರಕಟಣೆ ವೇಳೆ ಮೀಸಲಾತಿ ಅನುಸರಿಸಿಲ್ಲ ಎಂದು ಆರೋಪಿಸಿದರು.
ಪ್ರಮುಖರಾದ ಸೋಮಯ್ಯ ಮಲೆಯೂರು, ಸಿ.ಹರಕುಮಾರ್, ಸಿದ್ದಸ್ವಾಮಿ ಮೊದಲಾದವರು ಇದ್ದರು.