ನ್ಯೂಸ್

ಪ್ರವಾಹ ಪೀಡಿತರಿಗೆ ಕಾಂಗ್ರೆಸ್ ಸಾಂತ್ವನ

ಯಳಂದೂರು: ಇತ್ತೀಚೆಗೆ ಸುವರ್ಣಾವತಿ ನದಿಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಎಸ್. ಜಯಣ್ಣ, ನೇತೃತ್ವದ ತಂಡ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿತು.

ಪಟ್ಟಣ ಸೇರಿದಂತೆ ಕಣ್ಣೇಗಾಲ, ಹೊಮ್ಮ, ಗೂಳೀಪುರ, ಹೊಂಗನೂರು, ಗುಂಬಳ್ಳಿ, ಕೃಷ್ಣಾಪುರ, ಬೂದಿತಿಟ್ಟು, ಯರಿಯೂರು ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಮನೆ, ಕೃಷಿ ಭೂಮಿಯಲ್ಲಿ ಫಸಲು ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು.

ಆರ್.ಧ್ರುವನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ನೆರೆಯಿಂದ ಈ ಬಾರಿ ಹೆಚ್ಚಿನ ಹಾನಿಯಾಗಿದೆ. ಸರ್ಕಾರ ಇವರ ನೆರವಿಗೆ ಸಮರೋಪಾದಿಯಲ್ಲಿ ಕೆಲಸಗಳನ್ನು ಮಾಡಬೇಕಿದೆ. ಇವರಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಬೇಕು. ಇದರ ಮೊತ್ತವನ್ನು ಹೆಚ್ಚಿಸಬೇಕು. ಅಲ್ಲದೆ, ಮನೆ ಕಳೆದುಕೊಂಡವರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಬೇಕು. ಇನ್ನಷ್ಟು ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಅತಿವೃಷ್ಟಿಗೆ ಕಾರಣವಾಗುವ ನದಿ ಪಾತ್ರದ ಒತ್ತುವರಿ, ಕಾಲುವೆ ಒತ್ತುವರಿ ತೆರವುಗೊಳಿಸಬೇಕು, ಪ್ರವಾಹ ಸಂದರ್ಭದಲ್ಲಿ ಹವಾಮಾನ ಇಲಾಖೆ ನೀಡುವ ಸೂಚನೆ ಮೇರೆಗೆ ನದಿಪಾತ್ರದ ಜನರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ಅಲ್ಲದೆ, ನೆರೆಯಲ್ಲಿ ಅತಿ ಹೆಚ್ಚು ಹಾನಿಗೊಳಗಾದವರಿಗೆ ವೈಯಕ್ತಿಕ ಪರಿಹಾರ ವಿತರಣೆ ಮಾಡಿದರು.

ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಎಸ್. ಜಯಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ರವಿ, ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಇತರರಿದ್ದರು.