ಕಾಗವಾಡ: ತಾಲೂಕಿನಲ್ಲಿ ಸಂಭಾವ್ಯ ಪ್ರವಾಹ ಎದುರಿಸಿ, ಮುಂಜಾಗ್ರತ ಕ್ರಮ ಕೈಗೊಂಡು ಹಾನಿ ತಪ್ಪಿಸಲು ತಾಲೂಕಿನ ಎಲ್ಲ ಅಧಿಕಾರಿಗಳು ಶ್ರಮಿಸಬೇಕು. ಪ್ರವಾಹ ಭೀತಿ ಇರುವ ಗ್ರಾಮಗಳಿಗೆ ನೋಡಲ್ ಅಽಕಾರಿ ನೇಮಿಸಲಾಗಿದ್ದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್.ಸಂಪಗಾವಿ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಳೆ ಮತ್ತು ಪ್ರವಾಹ ಮುಂಜಾಗ್ರತೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ ೮ ಗ್ರಾಮಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದರೆ ಜನ-ಜಾನುವಾರು ಸ್ಥಳಾಂತರ, ಮೇವು, ಕುಡಿಯುವ ನೀರು ಮತ್ತು ಕಾಳಜಿ ಕೇಂದ್ರ ತೆರೆಯಲಾಗುವುದು. ತಾಲೂಕಿನಲ್ಲಿ ಒಟ್ಟು ೮ ಬೋಟ್‌ಸುಸ್ಥಿತಿಯಲ್ಲಿರಿಸಲಾಗಿದೆ. ಅಗತ್ಯವಿದ್ದರೆ ಎನ್‌ಡಿಎಫ್‌ಆರ್ ತಂಡ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಕರೊನಾ ಪ್ರಕರಣ ಕಂಡುಬರುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಹಸೀಲ್ದಾರ್ ರಾಜೇಶ ಬುರ್ಲಿ, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜೀವಕುಮಾರ ಸದಲಗಿ, ಜಯಾನಂದ ಹಿರೇಮಠ, ಬಸವರಾಜ ಮಗದುಮ್ಮ, ಆರ್‌ಎಫ್‌ಒ ರಾಕೇಶ ಅರ್ಜನವಾಡ, ಮಲ್ಲಿಕಾರ್ಜುನ ನಾಮದಾರ, ಪ್ರಶಾಂತ ಪೋತದಾರ, ಮಹಾಂತೇಶ ಕೌವಲಾಪೂರ, ಕೆ.ಕೆ.ಗಾವಡೆ, ಎ.ಡಿ.ಅನಸಾರಿ ಇತರರಿದ್ದರು.