ನ್ಯೂಸ್

ಪ್ರಧಾನಿ ಮೋದಿ ಸಮಾವೇಶಕ್ಕೆ ಟೈಟ್ ಸೆಕ್ಯೂರಿಟಿ

!
ಕೈಚೀಲ, ನೀರಿನ ಬಾಟಲ್, ಇಲೆಕ್ಟ್ರಾನಿಕ್ ವಸ್ತುಗಳಿಗೆ ನಿರ್ಬಂಧ

6 ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ

ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿರುವ ಕೇಂದ್ರ, ರಾಜ್ಯ ಗೃಹ ಇಲಾಖೆಯು ನಗರದ ಪ್ರತಿಯೊಂದು ಚಟುವಟಿಕೆ, ವಾಹನಗಳ ಸಂಚಾರ, ಲಾಡ್ಜ್‌ಗಳ ಮೇಲೆ ತೀವ್ರ ನಿಗಾ ವಹಿಸಿದೆ.
ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಸುಮಾರು 2 ಲಕ್ಷ ಜನರು ಸೇರಲಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಭಾಗವಹಿಸುತ್ತಿದ್ದಾರೆ. ನಗರದ ಸಿಪಿಇಡಿ ಮೈದಾನದಿಂದ ಸುಮಾರು ಎಂಟು ಕಿಮೀವರೆಗೆ ರೋಡ್ ಷೋ ನಡೆಸಲಿದ್ದಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ, ರಾಜ್ಯದ ಭದ್ರತಾ ಪಡೆಗಳು, ಗುಪ್ತಚರ ಇಲಾಖೆ ಅಧಿಕಾರಿಗಳು ನಗರವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದಿದ್ದಾರೆ.
ಫೆ.27ರಂದು ಭದ್ರತೆಗಾಗಿ ಬೆಳಗಾವಿ ನಗರ, ಜಿಲ್ಲೆ, ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಸೇರಿ ವಿವಿಧ ಭಾಗಗಳ ಪೊಲೀಸರು, ಹಿರಿಯ ಅಧಿಕಾರಿಗಳು, ಗೃಹ ದಳ, ಗುಪ್ತದಳ ಸೇರಿ 6 ಸಾವಿರ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಕೇಂದ್ರ ಬಸ್ ನಿಲ್ದಾಣದಿಂದ ಹಳೆಯ ಪಿಬಿ ರಸ್ತೆ, ಬಿ.ಎಸ್.ಯಡಿಯೂರಪ್ಪ ಮಾರ್ಗ, ಕಾಲೇಜು ರಸ್ತೆ, ಕ್ಲಬ್ ರಸ್ತೆ, ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣ ರಸ್ತೆಗಳ ಬದಿಗಳಲ್ಲಿ ರಾತ್ರಿ ಸಮಯದಲ್ಲಿ ವಹಿವಾಟು ಬಂದ್ ಮಾಡಲಾಗುತ್ತಿದೆ. ಸಮಾವೇಶ ನಡೆಯುವ ಪ್ರದೇಶ ಸುತ್ತಮುತ್ತ 1 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.