ಮಾಗಡಿ : ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಮಂಜುನಾಥ್, ಪುರಸಭೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಲ್ಲದೆ, ಎಷ್ಟು ಮಂದಿ ಊಟ, ತಿಂಡಿ ಮಾಡುತ್ತಿದ್ದಾರೆ ಎಂದು ಪ್ರತಿದಿನ ಪರಿಶೀಲಿಸುವಂತೆ ತಾಕೀತು ಮಾಡಿದರು.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ದಿಲೀಪ್ ನತಾಪ್ ಮಾತನಾಡಿ, ಕ್ಯಾಂಟೀನ್ ಆಹಾರದ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ. ಕ್ಯಾಂಟೀನ್‌ನ ಸ್ವಚ್ಛತೆ ಆಹಾರದ ಬಗ್ಗೆ ಮಾಹಿತಿ ಕೊಡುವುದು ನಮ್ಮ ಕೆಲಸವಾಗಿದೆ.
ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಒಬ್ಬೊಬ್ಬರು ನಾಲ್ಕು ಪ್ಯಾಕೆಟ್ ತಿಂಡಿ, ಊಟ ಪಡೆದು ಹೋಗುತ್ತಾರೆ. ಆಹಾರ ಕಳಪೆಯಾಗಿದ್ದರೆ ಅಷ್ಟು ಮಂದಿ ಏಕೆ ಬರುತ್ತಾರೆ ಎಂದರು.ಇದರಿಂದ ಕೆಂಡಾ ಮಂಡಲರಾದ ಶಾಸಕ ಮಂಜುನಾಥ್, ಪೌರ ಕಾರ್ಮಿಕರು ಕ್ಯಾಂಟೀನ್ ಆಹಾರದ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಹೇಳಿದಾಗ ಏನು ಮಾಡುತ್ತಿದ್ದೆ. ನೀನು ಏನು ಪರಿಶೀಲನೆ ನಡೆಸುತ್ತಿದ್ದೀಯಾ ಎಂದು ತರಾಟೆ ತೆಗೆದುಕೊಂಡು, ಪ್ರತಿದಿನ ಕ್ಯಾಂಟೀನ್ ಪರಿಶೀಲಿಸುವಂತೆ ಎಂದು ತಾಕೀತು ಮಾಡಿದರು.
ನಾವು ಇಲ್ಲಿಯೇ ತಿಂಡಿ ತಿನ್ನುತ್ತೇವೆ ಸರ್ ಎಂದು ಕಿರಿಯ ಆರೋಗ್ಯ ಸಹಾಯಕಿ ಕುಸುಮ ಶಾಸಕರಿಗೆ ಹೇಳಿದರು. ಇದಕ್ಕೆ ದನಿಗೂಡಿಸಿದ ಅಧ್ಯಕ್ಷೆ ಭಾಗ್ಯಮ್ಮ, ಪೌರಕಾರ್ಮಿಕ ಮೀಸೆ ನಾಗರಾಜು ಇತರ ಕಾರ್ಮಿಕರನ್ನು ಗುಂಪು ಕಟ್ಟಿಕೊಂಡು, ಕ್ಯಾಂಟೀನ್ ಆಹಾರ ಕಳಪೆಯಾಗಿದೆ, ಇಲ್ಲಿ ಏನನ್ನೂ ತಿನ್ನುವುದಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತಿದ್ದಾನೆ ಎಂದರು.ಇದರಿಂದ ಸಿಟ್ಟಿಗೆದ್ದ ಶಾಸಕರು, ಕ್ಯಾಂಟೀನ್ ಆಹಾರ ಸರಿಯಿಲ್ಲದಿದ್ದರೆ ಸಂಬಂಧಪಟ್ಟವರಿಗೆ ತಿಳಿಸಲಿ, ಸುಮ್ಮನೆ ಅಪಪ್ರಚಾರ ಮಾಡಬಾರದು. ಪೌರಕಾರ್ಮಿಕ ಮೀಸೆ ನಾಗರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪರಿಸರ ಅಭಿಯಂತರೆ ಸುಷ್ಮಾ ಕೂಡ ಮೀಸೆ ನಾಗರಾಜು ವಿರುದ್ಧ ಶಾಸಕರ ಬಳಿ ದೂರು ಹೇಳಿದರು.ಪುರಸಭಾಧ್ಯಕ್ಷೆ ಭಾಗ್ಯಮ್ಮ, ಪುರಸಭಾ ಸದಸ್ಯ ಅನಿಲ್ ಕುಮಾರ್, ಎಂ.ಆರ್.ರೇಖಾ, ದೊಡ್ಡಿ ಲೋಕೇಶ್, ಮುಖ್ಯಾಧಿಕಾರಿ ಮಹೇಶ್ ಇದ್ದರು.