ಹುಣಸೂರು: ಪ್ರತಿ ಗ್ರಾಮ ಪಂಚಾಯಿತಿಯಿಂದ ವರ್ಷಕ್ಕೊಂದು ಮಾದರಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಸ್ಮಶಾನವನ್ನು ಹೊಸದಾಗಿ ನಿರ್ಮಿಸುವ ಅಥವಾ ಅಭಿವೃದ್ಧಿಪಡಿಸುವ ಹೊಣೆಯನ್ನು ಆಯಾ ಇಲಾಖೆ ಅಧಿಕಾರಿಗಳು ಹೊರಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪಿಡಿಒಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಅಭಿವೃದ್ಧಿ ವಿಷಯದಲ್ಲಿ ಪಿಡಿಒ ಪ್ರಮುಖ ಪಾತ್ರ ವಹಿಸುತ್ತಾರೆ. ಪಿಡಿಒ ಬಳಿ ತನ್ನ ಗ್ರಾ.ಪಂ. ಅಭಿವೃದ್ಧಿ ಕುರಿತ ಕ್ರಿಯಾಯೋಜನೆ ಇರಬೇಕು. ವರ್ಷಕ್ಕೊಂದು ಶಾಲೆ, ಸ್ಮಶಾನ, ಆರೋಗ್ಯ ಕೇಂದ್ರ ಮತ್ತು ಅಂಗನವಾಡಿಯನ್ನು ಮಾದರಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ನನ್ನ ಗಮನಕ್ಕೆ ತರಬೇಕು. ಪಿಡಿಒಗಳು ಕಚೇರಿಯಲ್ಲಿ ಕೂರದೆ ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಬಗೆಹರಿಸಬೇಕು. ಒಂದು ವೇಳೆ ನಿಮ್ಮ ವ್ಯಾಪ್ತಿಯಲ್ಲಿ ಗ್ರಾಮೀಣರಿಂದ ದೂರುಗಳು ನನ್ನ ಬಳಿ ಬಂದರೆ ಶಿಸ್ತು ಕ್ರಮ ವಹಿಸುವುದು ಖಚಿತ ಎಂದು ಎಚ್ಚರಿಸಿದರು.
ಮಾಹಿತಿ ಅರಿಯಿರಿ: ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು. ಮಾಹಿತಿಯ ಕೊರತೆಯಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಂದ ತಿಳಿದುಕೊಳ್ಳಬೇಕು. ಬದಲಾಗಿ ಯೋಜನೆಯನ್ನೇ ವಿಫಲಗೊಳಿಸುವ ಕಾರ್ಯ ಬೇಡ. ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ವಿವಿಧ ವಸತಿ ಯೋಜನೆಗಳ ಅನುದಾನ ಫಲಾನುಭವಿಗಳಿಗೆ ಬಾಕಿ ಇದೆ. ಯೋಜನೆಗಳ ಕುರಿತು ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.
ಸಮಸ್ಯೆಯಾಗಬಾರದು: ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಜನ ಕುಡಿಯುವ ನೀರಿಗಾಗಿ ಪರಿತಪಿಸಬಾರದು ಎಂದರು.
ಹಲವು ಗ್ರಾಮಗಳಲ್ಲಿ ನೂತನ ಬಡಾವಣೆಗಳು ತಲೆ ಎತ್ತಿದ್ದು, ಅದರ ಸಂಪೂರ್ಣ ಅಭಿವೃದ್ಧಿ ಆದ ನಂತರ ನೀವು ಪಂಚಾಯಿತಿ ಎನ್‌ಒಸಿ ನೀಡಬೇಕು ಎಂದು ಸೂಚಿಸಿದ ಶಾಸಕರು, ಗ್ರಾಪಂಗಳಲ್ಲಿ 15ನೇ ಹಣಕಾಸು ನಿಧಿಯನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಿದ್ದೀರಿ? ಆರು ತಿಂಗಳು ಕಳೆದರೂ ಸಮರ್ಪಕವಾಗಿ ಕೆಲಸ ನಿರ್ವಹಣೆ ಆಗಿಲ್ಲ. ಕ್ರಿಯಾಯೋಜನೆ ಆಗಿದ್ದರೂ ಕೆಲಸ ಮಾಡಲು ಏಕೆ ನಿಧಾನವಾಗಿದೆ ಎಂದು ಪ್ರಶ್ನಿಸಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ: ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯವಿರುವ ಪುಸ್ತಕಗಳುನ್ನು ಗ್ರಂಥಾಲಯದಲ್ಲಿಡಬೇಕು. ಯುಪಿಎಸ್‌ಸಿ ಪರೀಕ್ಷೆ ಬರೆಯವ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ತಾಲೂಕಿನ ಇಒ, ತಮ್ಮ ಪಿಡಿಒಗಳಿಗೆ ಈ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಇಒ ಬಿ.ಕೆ.ಮನು ಅವರಿಗೆ ಸೂಚಿಸಿದರು. ಸಭೆಯಲ್ಲಿ ಎಇಇ ನರಸಿಂಹಯ್ಯ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಚ್.ಡಿ.ಲೋಕೇಶ್, ಲೆಕ್ಕಾಧಿಕಾರಿ ಸದಾಶಿವಯ್ಯ, ಕುಡಿಯುವ ನೀರು ಯೋಜನೆ ಎಇಇ ಕಲೀಂ, ಮತ್ತು 41 ಗ್ರಾ.ಪಂ.ಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.