ಎನ್.ಆರ್.ಪುರದಲ್ಲಿ ಡಾ. ಕೆ.ಪಿ.ಅಂಶುಮಂತ್ ಅವರು ಕಾಂಗ್ರೆಸ್ ಕಚೇರಿಯ ಕಟ್ಟಡ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ ನಿವೇಶನವನ್ನು ಹಸ್ತಾಂತರಿಸಿದರು. ಟಿ.ಡಿ.ರಾಜೇಗೌಡ, ಕೆ.ವಿಜಯ ಸುಲವಂತ್, ಗೇರ್‌ಬೈಲು ನಟರಾಜ್, ಎಲ್.ನಾರಾಯಣ್, ಶ್ರೀನಿವಾಸ್, ಕೆ.ಎಂ.ಸುಂದರೇಶ್, ಜುಬೇದಾ, ಪ್ರಶಾಂತ್ ಎಲ್. ಶೆಟ್ಟಿ, ಎಸ್.ಡಿ.ರಾಜೇಂದ್ರ, ಬಿಳಾಲುಮನೆ ಉಪೇಂದ್ರ, ಎಂ.ಆರ್.ರವಿಶಂಕರ್, ಉಮಾ, ಸುರಯ್ಯಭಾನು ಇದ್ದರು. 
ನ್ಯೂಸ್

ಪ್ರತಿ ತಾಲೂಕಿನಲ್ಲೂ ಕಾಂಗ್ರೆಸ್ ಭವನ ನಿರ್ಮಾಣ

ಎನ್.ಆರ್.ಪುರ: ಪ್ರತಿ ತಾಲೂಕಿನಲ್ಲೂ ಸುಸಜ್ಜಿತ ಕಾಂಗ್ರೆಸ್ ಭವನ ಕಟ್ಟಬೇಕು ಎಂದು ಕೆಪಿಸಿಸಿ ನಿರ್ಧರಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಅವರು ಪಟ್ಟಣದ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ ನಿವೇಶನವನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಅಂಶುಮಂತ್ ಅವರು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಿವೇಶನ ದಾನವಾಗಿ ನೀಡಿದ್ದಾರೆ. ಈ ಹಿಂದೆ ಅನೇಕರು ಕಾಂಗ್ರೆಸ್ ದೊಡ್ಡ ಹುದ್ದೆ ಅಲಂಕರಿಸಿದ್ದರೂ ಈ ರೀತಿಯಾಗಿ ದಾನ ನೀಡಿರಲಿಲ್ಲ. ಹಿಂದಿನಿಂದಲೂ ಮುಖಂಡರು ದಾನ ನೀಡುತ್ತ ಬಂದಿದ್ದರೆ ಎಲ್ಲ ತಾಲೂಕುಗಳಲ್ಲೂ ಕಾಂಗ್ರೆಸ್ ಭವನ ನಿರ್ಮಾಣವಾಗಿರುತ್ತಿತ್ತು ಎಂದರು.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ನಿರಂತರವಾಗಿ ಕಾಂಗ್ರೆಸ್ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಶೃಂಗೇರಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಿದ್ದು ಕಟ್ಟಡ ಉದ್ಘಾಟನೆಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಬಂದಿದ್ದರು. ಕೊಪ್ಪದಲ್ಲಿ ಲೀಸ್ ಮೇಲೆ ಕಟ್ಟಡ ಪಡೆದಿದ್ದು ಅಲ್ಲಿ ಕಾಂಗ್ರೆಸ್ ಕಚೇರಿ ನಡೆಸುತ್ತಿದ್ದೇವೆ. ಮುಂದೆ ಎನ್.ಆರ್.ಪುರದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದ ಶಂಕುಸ್ಥಾಪನೆಗೆ ಕೆಪಿಸಿಸಿ ಅಧ್ಯಕ್ಷರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಜನರಲ್ ಸೆಕ್ರಟರಿ ಕೆ.ವಿಜಯ ಸುಲವಂತ್ ಮಾತನಾಡಿ, ಡಿ.ಕೆ.ಶಿವಕುಮಾರ್ ಉತ್ಸಾಹದಿಂದ ಕೆಲಸ ಮಾಡಿ ಪಕ್ಷ ಕಟ್ಟುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶಾಸಕರ ಸಹಕಾರ ಪಡೆದು ಕಾಂಗ್ರೆಸ್ ಭವನ ಕಟ್ಟಲಾಗುತ್ತದೆ. ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.

ಡಾ. ಕೆ.ಪಿ.ಅಂಶುಮಂತ್ ಅವರನ್ನು ಅಭಿನಂದಿಸಲಾಯಿತು. ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ, ಕೆಪಿಸಿಸಿ ಕಾರ್ಯದರ್ಶಿ ಎಲ್.ನಾರಾಯಣ್, ಕೆಪಿಸಿಸಿ ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಸುಂದರೇಶ್, ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್.ಡಿ.ರಾಜೇಂದ್ರ, ಬಿಳಾಲುಮನೆ ಉಪೇಂದ್ರ, ಬೆನ್ನಿ, ಸುನೀಲ್‌ಕುಮಾರ್, ಉಮಾ, ಸುರೈಯಾ ಭಾನು, ವಾಸಿಂ, ಮನೋಹರ್ ಪಾಷಾ, ಕೆ.ವಿ.ರಾಜು, ದೇವಂತರಾಜ್, ನಂದೀಶ್, ಮಂಜಪ್ಪ ಗೌಡ, ಎಂ.ಆರ್.ರವಿಶಂಕರ್ ಇತರರಿದ್ದರು.