ಶೃಂಗೇರಿ: ಮಲೆನಾಡಿನಲ್ಲಿ ಶ್ರಾವಣ ಮಾಸದ ಸಂಭ್ರಮ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಶ್ರಾವಣದಲ್ಲಿ ಈ ಹಿಂದೆ ಕೃಷಿ ಚಟುವಟಿಕೆಗಳ ನಡುವೆ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಿ, ಅಂಗಳಕ್ಕೆ ಸಗಣಿ ಸಾರಿಸಿ ರಂಗೋಲಿ ಇಡುತ್ತಿದ್ದರು.
ಹೊಸ್ತಿಲು ಸಾರಿಸಿ ಹೂಗಳನ್ನು ಇಟ್ಟು ಮನೆಗೆ ಗೋಮೂತ್ರ ಸಿಂಪಡಿಸಿ ಶ್ರಾವಣ ಶನಿವಾರವನ್ನು ಅಂದಿನ ಹಿರಿಯರು ಶ್ರದ್ಧೆಯಿಂದ ಆಚರಿಸುತ್ತಿದ್ದರು. ಶ್ರಾವಣ ಶನಿವಾರ ಭಕ್ತಿಯಿಂದ ದೇವರನ್ನು ಸ್ಮರಿಸಬೇಕು. ಈ ಮಾಸದಲ್ಲಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇತ್ತು.
ಶ್ರಾವಣ ಮಾಸದಲ್ಲಿ ಸೂರ್ಯ ತನ್ನ ಸ್ವಕ್ಷೇತ್ರದಿಂದ ಸಿಂಹ ರಾಶಿಗೆ ಆಗಮಿಸುತ್ತಾನೆ. ಈ ಸಂದರ್ಭದಲ್ಲಿ ಸೂರ್ಯದೇವನ ಬಿಂಬವನ್ನು ಬರೆದು ಗರಿಕೆ, ಬಣ್ಣಬಣ್ಣದ ಹೂಗಳನ್ನು ಅರ್ಪಿಸುವ ಪದ್ಧತಿ ಇಂದಿಗೂ ಇದೆ. ಗೌಡಸಾರಸ್ವತ ಬ್ರಾಹ್ಮಣ ಮುತ್ತೈದೆಯರು ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ತುಳಸಿ ಸನ್ನಿಧಿಯಲ್ಲಿ ಚೂಡಿ ಪೂಜೆಯನ್ನು ಕುಟುಂಬದ ಸುಮಂಗಲಿಯರು ಒಟ್ಟುಗೂಡಿ ಆಚರಿಸುತ್ತಾರೆ.
ಏನಿದು ಚೂಡಿ ಪೂಜೆ?
ಚೂಡಿಗೆ ಸೂಡಿ ಎಂದು ಕರೆಯುತ್ತಾರೆ. ಸೂಡಿ ಎಂದರೆ ಅರ್ಥಾತ್ ಗಂಟು ಅಥವಾ ಗುಂಪು. ಪರಿಸರದಲ್ಲಿ ದೊರಕುವ ಗರಿಕೆ ಹುಲ್ಲು, ರಥಪುಷ್ಪ, ಕರವೀರ, ರತ್ನಗಂ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಕಾಗೆಕಣ್ಣು, ಸಾಸಿವೆ ಹೂವು ಇತ್ಯಾದಿಗಳನ್ನು ಒಟ್ಟುಗೂಡಿಸಿ ಬಾಳೆಹಗ್ಗದಿಂದ ಒಟ್ಟಿಗೆ ಕಟ್ಟಿದ್ದರೆ ಅದೇ ಚೂಡಿ.
ಪ್ರಾತಃಕಾಲ ಚೂಡಿಪೂಜೆಗೆ ಪ್ರಶಸ್ತಕಾಲ. ಮಧ್ಯಾಹ್ನ 12 ಗಂಟೆಯೊಳಗೆ ಪೂಜೆ ಮುಗಿಸಬೇಕು. ಬೆಳಗ್ಗೆ ಮಂಗಳ ಸ್ನಾನದ ಬಳಿಕ ಮುತ್ತೈದೆಯರು ಸಾಂಪ್ರದಾಯಿಕ ಶೈಲಿಯ 18 ಮೊಳದ ಸೀರೆಯನ್ನು ಉಟ್ಟು ಬಾವಿಯ ದಂಡೆಗೆ ಹಳದಿ, ಕುಂಕುಮ ಹಚ್ಚಿ ಹೂವು ಇಟ್ಟು ನೀರಿಗೆ ಅರಶಿಣ-ಕುಂಕುಮ ಸಮರ್ಪಿಸಿ, ಗಂಗೆಯನ್ನು ಸ್ಮರಿಸಿ ನೀರು ತೆಗೆದು ಅದನ್ನು ತುಳಸಿ ಕಟ್ಟೆಯ ಮುಂದಿಟ್ಟು, ರಂಗೋಲಿ ಹಾಕಿ ಹೊಸ್ತಿಲಿಗೆ ಶೇಡಿ ಬರೆದು ಚೂಡಿ ಪೂಜೆ ಪ್ರಾರಂಭಿಸುತ್ತಾರೆ.
ದೀಪ ಹಚ್ಚಿ ತುಳಸಿಗೆ ನೀರು ಎರೆದು ಅರಶಿಣ-ಕುಂಕುಮ, ಗಂಧ ಹಚ್ಚಿ ವೀಳ್ಯದ ಜತೆ ಚೂಡಿ ಅರ್ಪಿಸಲಾಗುತ್ತದೆ. ಹಣ್ಣುಕಾಯಿ, ಪಂಚಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ಬಳಿಕ ತುಳಸಿಗೆ ಐದು ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿಗೂ ತುಳಸಿ ಹಾಗೂ ಸೂರ್ಯ ದೇವನಿಗೆ ಅಕ್ಷತೆ ಹಾಕುತ್ತಾರೆ. ಬಳಿಕ ದೇವರಕೋಣೆಯಲ್ಲಿ ದೀಪ ಬೆಳಗಿ ಕುಟುಂಬದ ಗೃಹಿಣಿಯರಿಗೆ ಮುತ್ತೈದೆ ಭಾಗ್ಯ ಹಾಗೂ ಕುಟುಂಬದ ಸಂಬಂಧಗಳು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮನೆಯ ಪ್ರಧಾನ ಹೊಸ್ತಿಲಿಗೆ ಪೂಜೆ ಮಾಡಿ ಚೂಡಿ ಅರ್ಪಿಸಲಾಗುತ್ತದೆ. ದೇವರ ಕೋಣೆಯಲ್ಲಿ ಮನೆ, ಗ್ರಾಮ ದೇವರುಗಳ ಸನ್ನಿಧಿಗೆ ಚೂಡಿ ಸಮರ್ಪಿಸಲಾಗುತ್ತದೆ.