ನ್ಯೂಸ್

ಪ್ಯಾಕ್ಸ್‌ಗಳ ಗಣಕೀಕರಣ ವಿಳಂಬ: ಸಿಇಒಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

ಕೋಲಾರ: ಅವಿಭಜಿತ ಜಿಲ್ಲೆಯ 194 ಪ್ಯಾಕ್ಸ್‌ಗಳಲ್ಲಿ ಗಣಕೀಕರಣ ಕಾರ್ಯ ಮುಗಿದಿದ್ದು, ಬಾಕಿ 19 ಪ್ಯಾಕ್ಸ್‌ಗಳಲ್ಲಿ ವಿಳಂಬಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಡಿಮಿಡಿಗೊಂಡರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಅವಿಭಜಿತ ಜಿಲ್ಲೆಯ ಬ್ಯಾಂಕ್, ಸೊಸೈಟಿ ಸಿಬ್ಬಂದಿಯೊಂದಿಗೆ ಆನ್‌ಲೈನ್‌ನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್) ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜ.15ರೊಳಗೆ 19 ಪ್ಯಾಕ್ಸ್‌ಗಳಲ್ಲಿ ಗಣಕೀಕರಣ ಕಾರ್ಯ ಪೂರ್ಣಗೊಳಿಸದಿದ್ದರೆ ಸಿಇಒಗಳನ್ನು ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈಗಾಗಲೇ 175 ಸೊಸೈಟಿಗಳಲ್ಲಿ ಗಣಕೀಕರಣ ಅನುಷ್ಠಾನಕ್ಕೆ ಸಿಇಒಗಳು ತೋರಿದ ಬದ್ಧತೆಯನ್ನು ಉಳಿದವರು ಏಕೆ ತೋರುತ್ತಿಲ್ಲ ಎಂದು ಮಾಲೂರು ತಾಲೂಕಿನ ಟೇಕಲ್, ನೂಟ್‌ವೇ, ಚಿಕ್ಕಬಳ್ಳಾಪುರ ಕಸಬಾ ಸೊಸೈಟಿ, ಗೌರಿಬಿದನೂರು ತಾಲೂಕಿನ ಭತ್ತನಹಳ್ಳಿ, ಚಿಂತಾಮಣಿ ತಾಲೂಕಿನ ಯಗವಕೋಟೆ, ಟಿ.ಗೊಲ್ಲಹಳ್ಳಿ ಸೊಸೈಟಿಗಳ ಆಡಿಟ್ ಪೆಂಡಿಂಗ್ ಇರುವ ಕುರಿತು ಸೊಸೈಟಿ ಸಿಇಒರನ್ನು ತರಾಟೆಗೆ ತೆಗೆದುಕೊಂಡರು.

ಪ್ಯಾಕ್ಸ್ ವ್ಯವಸ್ಥೆ ಗಣಕೀಕರಣಗೊಳಿಸುವ ಎರಡು ವರ್ಷಗಳ ಪ್ರಯತ್ನ ಫಲ ನೀಡಿದ್ದು, ಈ ಕಾರ್ಯಕ್ಕೆ ಎಲ್ಲ ಬ್ಯಾಂಕ್ ಶಾಖೆಗಳ ಸಿಬ್ಬಂದಿ, ವಿ-ಸಾಫ್ಟ್ ಸಂಸ್ಥೆಯ ನೌಕರರು ಶ್ರಮಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಗುರಿ ಮುಟ್ಟಿದರೆ ಸಹಕಾರಿ ಬ್ಯಾಂಕಿಂಗ್ ಇತಿಹಾಸದಲ್ಲಿ ಇದೊಂದು ಚರಿತ್ರಾರ್ಹ ಸಾಧನೆಯಾಗಲಿದೆ ಎಂದರು.

ಗಣಕೀಕೃತ ವಹಿವಾಟು ಮುಗಿಸುವಲ್ಲಿ ಶ್ರಮಿಸಿದ ಬ್ಯಾಂಕ್ ಸಿಬ್ಬಂದಿ, ವಿ-ಸಾಫ್ಟ್ ಸಿಬ್ಬಂದಿ, ಸೊಸೈಟಿ ಸಿಇಒಗಳು ಸೇರಿದಂತೆ ದುಡಿದವರನ್ನು ಫೆಬ್ರವರಿ ಮೊದಲ ವಾರ ಸಭೆ ಕರೆದು ಅಭಿನಂದಿಸುವುದಾಗಿ ತಿಳಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಗಣಕೀಕರಣ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ಪ್ಯಾಕ್ಸ್‌ಗಳ ಸಿಇಒಗಳು, ಜವಾಬ್ದಾರಿ ಹೊತ್ತ ವಿ-ಸಾಫ್ಟ್ ಸಿಬ್ಬಂದಿ, ಶಾಖಾ ಸಿಬ್ಬಂದಿಗೆ ಸೂಚನೆ ನೀಡಿದರು.

ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ನಾಗೇಶ್, ಅಧಿಕಾರಿ ಹುಸೇನ್ ದೊಡ್ಡಮನಿ ಇದ್ದರು.