ಎನ್.ಆರ್.ಪುರದ ಕಟಗಳಲೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಪಿ.ಪಿ.ಬೇಬಿ ಮಾಹಿತಿ ನೀಡಿದರು. ಪ್ರಭಾಕರ್, ಪ್ರಿನ್ಸಿ ಸೆಬಾಸ್ಟಿನ್ ಇತರರಿದ್ದರು. 
ನ್ಯೂಸ್

ಪೌಷ್ಟಿಕ ಆಹಾರದಿಂದ ಆರೋಗ್ಯ

ಎನ್.ಆರ್.ಪುರ: ಪ್ರತಿಯೊಬ್ಬರೂ ಯೋಗ, ಧ್ಯಾನ ಮಾಡಬೇಕು. ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಾಲೂಕು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಸಲಹೆ ನೀಡಿದರು.

ಕಟಗಳಲೆಯಲ್ಲಿ ಸೋಷಿಯಲ್ ವೆಲ್ಫೇರ್ ಸೊಸೈಟಿ ಆಶ್ರಯದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ವಹಿಸಬೇಕು. ಇತ್ತೀಚೆಗೆ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿದೆ. ಮಹಿಳೆಯರಿಗೆ ಕಿಬ್ಬೊಟ್ಟೆ ನೋವು ಕಾಣಿಸಿದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶಶಿಕಲಾ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಎಷ್ಟೇ ಸಾಧನೆ ಮಾಡಿದರೂ ಕುಟುಂಬದಲ್ಲಿ ಈಗಲೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಯಾವುದೆ ಮಹಿಳೆ ಕುಟುಂಬದಲ್ಲಿ ಮಾನಸಿಕ, ದೈಹಿಕ ದೌರ್ಜನ್ಯಕ್ಕೆ ಒಳಗಾದರೆ ಮಹಿಳಾ ಸಾಂತ್ವನ ಸಹಾಯವಾಣಿ 181ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು. ತಾಲೂಕಿನಲ್ಲಿ ಮಹಿಳಾ ಸಾಂತ್ವನವಾಣಿ ಕೇಂದ್ರ ಇದ್ದು ಮಹಿಳೆಯರಿಗಾಗಿ ಕಾರ್ಯನಿರ್ವಹಿಸುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡಿದರೆ ಕಾನೂನು ಮೂಲಕ ಸಹಾಯ ಮಾಡುತ್ತೇವೆ ಎಂದರು.

ಸೋಷಿಯಲ್ ವೆಲ್ಫೇರ್ ಸೊಸೈಟಿ ಸಹಾಯಕ ನಿರ್ದೇಶಕ ಫಾ. ಅಭಿನವ್ ಮಾತನಾಡಿ, ಸೋಷಿಯಲ್ ವೆಲ್ಫೇರ್ ಸೊಸೈಟಿಯಿಂದ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿಶೇಷವಾಗಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗಾಗಿ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಮಾತನಾಡಿ, ಹಲವು ವರ್ಷಗಳಿಂದ ಸೋಷಿಯಲ್ ವೆಲ್ಫೇರ್ ಸೊಸೈಟಿಯಿಂದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ತರಬೇತಿ, ಮಾಹಿತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದರು. ಸೋಷಿಯಲ್ ವೆಲ್ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪ್ರಿನ್ಸಿ ಸೆಬಾಸ್ಟಿನ್ ಇತರರಿದ್ದರು.