ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆಯ ವೇಳೆ ಶಾಸಕ ಎಚ್.ಪಿ.ಮಂಜುನಾಥ್ ಉತ್ತಮ ಕರ್ತವ್ಯ ನಿರ್ವಹಣೆ ತೋರಿದ ಪೌರಕಾರ್ಮಿಕರನ್ನು ಸನ್ಮಾನಿಸಿದರು. ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ಸೌರಭ ಸಿದ್ದರಾಜು, ಪೌರಾಯುಕ್ತ ಖಲೀಲ್ ಸಾಬ್ ಇತರರಿದ್ದಾರೆ. 
ನ್ಯೂಸ್

ಪೌರಕಾರ್ಮಿಕರಿಗೆ ಮಾತಿನ ಸಹಾನುಭೂತಿ ಬೇಡ

ಹುಣಸೂರು: ಪೌರಕಾರ್ಮಿಕರ ಕುರಿತು ಬರಿ ಮಾತಿನ ಕಾಳಜಿಯಾಗದೆ ನಿಜವಾಗಿಯೂ ಅವರ ಅಭಿವೃದ್ಧಿಗಾಗಿ ಕ್ರಮವಹಿಸುವ ಜವಾಬ್ದಾರಿಯನ್ನು ಸರ್ಕಾರ ಪ್ರದರ್ಶಿಸಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.


ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರ ಕುರಿತು ನಾವೆಲ್ಲರೂ ಕೇವಲ ಬಾಯಿಮಾತಿನ ಸಹಾನುಭೂತಿ ತೋರುತ್ತೇವೆ. ಇದು ಸರಿಯಲ್ಲ. ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ಕುರಿತು ನಿಜವಾದ ಕಾಳಜಿ ನಮ್ಮೆಲ್ಲರದ್ದಾಗಿರಬೇಕು. ನಗರ ಸ್ವಚ್ಛತೆ ಕಾಪಾಡುವ ವೇಳೆ ಪೌರಕಾರ್ಮಿಕರು ಕೇವಲ ಅಧಿಕಾರಿಗಳ ಮಾತು ಕೇಳಿದರೆ ಮಾತ್ರ ಸಾಲದು. ನಿಮ್ಮ ಕೆಲಸದಲ್ಲಿನ ಅನುಭವ ಇಂಜಿನಿಯರ್‌ಗಳ ಅನುಭವಕ್ಕಿಂತಲೂ ಹಿರಿದು. ನೀವೇ ಒಂದು ರೀತಿಯಲ್ಲಿ ಇಂಜಿನಿಯರುಗಳು. ಹಾಗಾಗಿ ಸಮಸ್ಯೆಯೊಂದರ ಪರಿಹಾರಕ್ಕೆ ನಿಮ್ಮ ಸಲಹೆಯನ್ನು ಒಮ್ಮತವಾಗಿ ಆಳುವವರಿಗೆ ನೀಡಿ ಎಂದು ಸಲಹೆ ನೀಡಿದರು.


ನಗರಸಭಾ ಸದಸ್ಯೆ ರಾಣಿ ಪೆರುಮಾಳ್ ಮಾತನಾಡಿ, ರಾಜ್ಯ ಸರ್ಕಾರ ತಮ್ಮಗಳ ಬಹುದಿನದ ಬೇಡಿಕೆಯಾದ ಕೆಲಸ ಕಾಯಂ ಕುರಿತು ನಿರ್ಧಾರ ಪ್ರಕಟಿಸಿ ಮೊದಲ ಹಂತದಲ್ಲಿ 11 ಸಾವಿರಕ್ಕೂ ಅಧಿಕ ಪೌರಕಾರ್ಮಿಕರನ್ನು ಕಾಯಂಗೊಳಿಸುವ ನಿರ್ಧಾರ ಪ್ರಕಟಿಸಿರುವುದು ಸ್ವಾಗತಾರ್ಹ. ಅಂತೆಯೇ ಗ್ರಾ.ಪಂ.ಗಳು ಮತ್ತು ಪಟ್ಟಣ ಪಂಚಾಯಿತಿಗೂ ಈ ನೀತಿ ಅಳವಡಿಸಲಿ. ಪೌರಕಾರ್ಮಿಕರು ತಮ್ಮ ವೃತ್ತಿಯನ್ನು ತಮ್ಮ ಮಕ್ಕಳಿಗೆ ಮುಂದುವರೆಸಿಕೊಂಡು ಹೋಗುವ ನಿರ್ಧಾರವನ್ನು ಕೈಬಿಟ್ಟು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರಿ ಎಂದು ಕೋರಿದರು.

ಅಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಸಾಯಿನಾಥ್, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಸದಸ್ಯರಾದ ಕೃಷ್ಣರಾಜ ಗುಪ್ತಾ, ಶರವಣ, ರಮೇಶ್, ಮನು, ಸೌರಭ ಸಿದ್ದರಾಜು, ಅನುಷಾ, ಪೌರಾಯುಕ್ತ ಖಲೀಲ್ ಸಾಬ್, ಪರಿಸರ ಇಂಜಿನಿಯರ್ ಎಲ್.ರೂಪಾ, ಅಧಿಕಾರಿಗಳಾದ ಸತೀಶ್, ಸುಧೀರ್ ಇತರರು ಇದ್ದರು. ಇದೇ ವೇಳೆ ಉತ್ತಮ ಕರ್ತವ್ಯ ನಿರ್ವಹಣೆ ತೋರಿದ ಪೌರಕಾರ್ಮಿಕರಾದ ವಿಷ್ಣು, ಸುಬ್ರಮಣ್ಯ, ಸುನಿಲ್‌ಕುಮಾರ್, ಮಾಗಾಳಿ, ಶಿವಸ್ವಾಮಿ ಮತ್ತು ಗಣೇಶ್‌ರನ್ನು ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.