ನ್ಯೂಸ್

ಪೌರಕಾರ್ಮಿಕರನ್ನು ನೇರ ನೇಮಕಾತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಿ

ರಾಜ್ಯದಲ್ಲಿ ಈಗ ಬಾಕಿ ಉಳಿದಿರುವ 24 ಸಾವಿರ ಪೌರಕಾರ್ಮಿಕರನ್ನು ಈ ಕೂಡಲೇ ನೇರ ನೇಮಕಾತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಬೇಕು. ಒಳಚರಂಡಿ ಕಾರ್ಮಿಕರನ್ನೂ ಪರಿಗಣಿಸಬೇಕು. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಮೈಸೂರು ನಗರಪಾಲಿಕೆ ಕಾಯಂ ಪೌರ ಕಾರ್ಮಿಕರ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ಮಹಾ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಆಗ್ರಹಿಸಿದರು.

ಸರ್ಕಾರ ಪದೆ ಪದೇ ಭರವಸೆ ನೀಡುತ್ತ ಬಂದಿದ್ದರೂ ಈ ಕುರಿತು ಕ್ರಮ ಕೈಗೊಂಡಿಲ್ಲದಿರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರಿ ನೌಕರರ ರೀತಿ ಇವರಿಗೂ ಆರೋಗ್ಯ ಸಂಜೀವಿನಿ ವಿಸ್ತರಿಸಬೇಕು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ನೇರ ನೇಮಕಾತಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 68 ಕಾರ್ಮಿಕರು ಸೇವಾವಧಿಯಲ್ಲಿ ಮರಣ ಹೊಂದಿದ್ದಾರೆ. ಇವರ ಕುಟುಂಬದ ಅವಲಂಬಿತರಿಗೆ ಮಾನವೀಯತೆ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪಾಲಿಕೆಯಲ್ಲಿನ 231 ಒಳಚರಂಡಿ ಸಹಾಯಕ ಕಾರ್ಮಿಕರು ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇವರನ್ನೂ ನೇರ ನೇಮಕಾತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಬೇಕು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಮನೆ ಮನೆ ಕಸ ವಿಲೇವಾರಿ ಹಾಗೂ ಕಸ ಸಂಗ್ರಹಣೆ ಮಾಡುವ ಕಸದ ಆಟೋ ಟಿಪ್ಪರ್ ಚಾಲಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಪಾಲಿಕೆಯಲ್ಲಿ ಇನ್ನುಳಿದಂತೆ ಖಾಲಿ ಇರುವ 156 ಪೌರಕಾರ್ಮಿಕರ ಹುದ್ದೆಗಳನ್ನು ಈ ಕೂಡಲೇ ನೇಮಕ ಮಾಡಿಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಪದಾಧಿಕಾರಿಗಳಾದ ಕುಮಾರಸ್ವಾಮಿ, ಶ್ರೀನಿವಾಸ್ ಇದ್ದರು.