ನಂಜನಗೂಡು: ನಗರದ ಪೌರ ಕಾರ್ಮಿಕರಿಗೆ ಮಹದೇವನಗರದ ಬಳಿ ನಿವೇಶನ ನೀಡಲಾಗುವುದು ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.
ನಗರದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರ ಕೆಲಸವನ್ನು ಸುಗಮಗೊಳಿಸುವ ಸಲುವಾಗಿ ನಂಜನಗೂಡು ನಗರಭೆಗೆ ಸಕ್ಕಿಂಗ್, ಜಟ್ಟಿಂಗ್ ಮೆಷಿನ್ ತರಿಸಲಾಗಿದೆ. ಮೈಸೂರಿನ ಮಹಾನಗರ ಪಾಲಿಕೆ ಮಾದರಿಯಲ್ಲಿ ಕಸ ಗುಡಿಸುವ ಯಂತ್ರವನ್ನು ತರಲು ಉದ್ದೇಶಿಸಲಾಗಿದ್ದು ಅದು ಟೆಂಡರ್ ಹಂತದಲ್ಲಿದೆ ಶೀಘ್ರದಲ್ಲಿ ಮೆಷಿನ್ ತರಲಾಗುವುದು ಎಂದರು.
ಬಿಜೆಪಿ ಸಕಾರ ಅಧಿಕಾರಕ್ಕೆ ಬಂದಲ್ಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದೆ. ನಮ್ಮ ಸರ್ಕಾರ ಹೇಳಿದನ್ನು ಅನುಷ್ಠಾನಕ್ಕೆ ತರುವುದರಲ್ಲಿ ಮುಂದಿದೆ ಎಂದರು.
ಹುಲ್ಲಹಳ್ಳಿ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವ ವಿಚಾರದಲ್ಲಿ ಹಲವಾರು ಟೀಕೆಗಳು ವ್ಯಕ್ತವಾದವು. ಆದರೂ ನೋವನ್ನು ಸಹಿಸಿ ಕೆಲಸ ನಿರ್ವಹಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ನಾನು ಬರೀ ಆಶ್ವಾಸನೆ ನೀಡುವುದಿಲ್ಲ, ಹೇಳಿದನ್ನು ಕಾರ್ಯಗತಗೊಳಿಸುತ್ತೇನೆ ನಗರದಲ್ಲೂ ಸಹ 2.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿಕೊಡಲು ಬದ್ಧನಾಗಿದ್ದೇನೆ, ಈಗಾಗಲೇ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಜಾಗ ಗುರ್ತಿಸಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿಶಂಕರಪ್ಪ, ಸದಸ್ಯರಾದ ಮಹದೇವಪ್ರಸಾದ್, ಸಿದ್ದರಾಜು, ರಂಗಸ್ವಾಮಿ, ದೇವು, ಮಹದೇವಮ್ಮ, ವಿಜಯಲಕ್ಷ್ಮಿ, ಮುಖಂಡರಾದ ಚೆಲುವರಾಜು, ನಗರಸಭಾ ಆಯುಕ್ತ ರಾಜಣ್ಣ, ಎಇಇ ಸುರೇಶ್, ಮೈತ್ರಾದೇವಿ ಇದ್ದರು.