ಗೋಣಿಕೊಪ್ಪಲು: ಕೈಲ್ ಪೋಳ್ದ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಸಮಾಜ ಸೇವಕಿ ಕೊಟ್ಟಂಗಡ ವಿಜು ದೇವಯ್ಯ ಅವರು ಹಬ್ಬದ ಉಡುಗೊರೆಯಾಗಿ ಆಹಾರ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಅವರು ಪಂಚಾಯಿತಿ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯಿಂದ ನಗರವು ಶುಚಿತ್ವ ಕಾಣಲು ಸಾಧ್ಯವಾಗುತ್ತಿದೆ. ನಿರಂತರ ಶುಚಿತ್ವ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆರೋಗ್ಯ ತಪಾಸಣೆಯನ್ನು ಕೂಡ ಮಾಡಿಸಿಕೊಳ್ಳಬೇಕು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೈಲ್ ಪೋಳ್ದ್ ಹಬ್ಬದಂದು ಗೋಣಿಕೊಪ್ಪ ಗ್ರಾ.ಪಂ.ಯ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ತಮ್ಮ ಸಮಾಜ ಸೇವೆಯನ್ನು ವಿಜು ದೇವಯ್ಯ ಮುಂದುವರಿಸಿದ್ದಾರೆ. ಈ ವೇಳೆ ಪಂಚಾಯಿತಿಯ ಪೌರಕಾರ್ಮಿಕ ಮಂಜು ದಾನಿಗಳ ಸಹಕಾರವನ್ನು ಶ್ಲಾಘಿಸಿದರು. 16 ಪೌರ ಕಾರ್ಮಿಕರ ಕುಟುಂಬಗಳು ಉಪಸ್ಥಿತರಿದ್ದರು.