ಮೂಡಿಗೆರೆ:·ನಕ್ಸಲಿಯರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸುತ್ತಾರೆಂಬ ಕಾರಣಕ್ಕಾಗಿ 30 ವರ್ಷದ ಹಿಂದೆ ಗೋಣಿಬೀಡು, ಬಣಕಲ್, ಬಾಳೂರು ಸೇರಿದಂತೆ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಯ ಮುಖ್ಯದ್ವಾರದ ಎದುರು ನಿರ್ಮಿಸಿರುವ ಕಿಂಡಿಯುಳ್ಳ ತಡೆಗೋಡೆಯನ್ನು ತೆರವುಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
1990 ರಿಂದ 2000ವರೆಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿತ್ತು. 1996ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಎಂ.ಪಿ.ಪ್ರಕಾಶ್ ಗೃಹ ಸಚಿವರಾಗಿದ್ದರು. ಮಲೆನಾಡು ಭಾಗದಲ್ಲಿ ಹೆಚ್ಚು ನಕ್ಸಲ್ ಚಟುವಟಿಕೆಯಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವರು 64 ಮಂದಿಯ ವಿರುದ್ಧ ವಿವಿಧ ಠಾಣೆಗಳಲ್ಲಿ ನಕ್ಸಲ್ ಚಟುವಟಿಕೆಗೆ ಪ್ರೇರೇಪಣೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ನಂತರ ಆ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಅಂದಿನ ಕ್ಲಿಷ್ಟಕರ ಸಂದರ್ಭದಲ್ಲಿ ಎಚ್ಚರಿಕೆ ಕ್ರಮವಾಗಿ ನಕ್ಸಲ್ ಪೀಡಿತ ಪ್ರದೇಶದ ಎಲ್ಲ ಪೊಲೀಸ್ ಠಾಣೆಗಳ ಮುಖ್ಯದ್ವಾರದ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸಲು ಅಂದಿನ ಗೃಹ ಸಚಿವ ಎಂ.ಪಿ.ಪ್ರಕಾಶ್ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಯ ಮುಖ್ಯದ್ವಾರದ ಎದುರು ಕಿಂಡಿಯುಳ್ಳ ತಡೆಗೋಡೆ ನಿರ್ಮಿಸಲಾಗಿದೆ.
ಠಾಣೆಯ ವರಾಂಡದಲ್ಲಿ ಚಿಕ್ಕದೊಂದು ಕೊಠಡಿ ನಿರ್ಮಿಸಿ ಅದಕ್ಕೂ ಕಿಂಡಿಗಳನ್ನು ನಿರ್ಮಿಸಲಾಗಿದೆ. ಆ ಕೊಠಡಿಯಲ್ಲಿ ಶಸ್ತ್ರಸಜ್ಜಿತ ಶಾರ್ಪ್ ಶೂಟರ್ ಸಿಬ್ಬಂದಿ ನೇಮಿಸಲಾಗಿತ್ತು. ಅಕಸ್ಮಾತ್ ಪೊಲೀಸ್ ಠಾಣೆ ಮೇಲೆ ನಕ್ಸಲ್ ದಾಳಿ ನಡೆದರೆ ಕಿಂಡಿ ಮೂಲಕ ಪ್ರತಿ ದಾಳಿ ನಡೆಸಲು ಪೊಲೀಸ್ ಇಲಾಖೆ ವ್ಯವಸ್ಥೆ ನಡೆಸಿತ್ತು. ಇಂತಹ ವಿವಿಧ ರೀತಿಯ ಕ್ರಮದಿಂದ ನಕ್ಸಲ್ ದಾಳಿಯಿಂದ ಪೊಲೀಸ್ ಠಾಣೆಗಳು ರಕ್ಷಣೆ ಪಡೆದಿದ್ದವು.