ನ್ಯೂಸ್

ಪೊಲೀಸ್ ಕೊಲೆ ಯತ್ನ ಮಾಯಾ- ಕಾರ್ಖಾನಾ ಗ್ಯಾಂಗ್ ಜಂಟಿ ಕೃತ್ಯ

ಮಂಗಳೂರು: ನಗರದ ಬಂದರು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಗಣೇಶ್ ಕಾಮತ್ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿಗಳ ಪೈಕಿ ಮತ್ತೆ ಬಂಧಿತ ಮೂವರು ಕಾರ್ಖಾನಾ ಗ್ಯಾಂಗ್‌ಗೆ ಸೇರಿದವರು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬೋಳಾರದ ಇಬ್ರಾಹಿಂ ಶಾಕೀರ್ (19), ಕುದ್ರೋಳಿ ನಿವಾಸಿಗಳಾದ ಅಕ್ಬರ್ (30), ಮೊಹಮ್ಮದ್ ಹನೀಫ್ (32) ಕಾರ್ಖಾನಾ ಗ್ಯಾಂಗ್‌ಗೆ ಸೇರಿದವರು. ಈ ಹಿಂದೆ ಬಂಧಿತ ಎಂಟು ಮಂದಿ ಮಾಯಾ ಗ್ಯಾಂಗ್‌ಗೆ ಸೇರಿದವರು. ಎರಡು ಗ್ಯಾಂಗ್ ಜತೆಯಾಗಿ ಪೊಲೀಸ್ ಮೇಲೆ ಕೃತ್ಯ ನಡೆಸಿದೆ.
ಕಳೆದ ವರ್ಷ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್‌ಗೆ ಪ್ರತೀಕಾರವಾಗಿ ಆರೋಪಿಗಳು ಕೃತ್ಯ ನಡೆಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗುತ್ತಿದ್ದು, ಇನ್ನು ಯಾರಾದರೂ ಈ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಪೊಲೀಸರು ಸಾರ್ವಜನಿಕರಿಗೆ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಮೇಲೆ ಹಲ್ಲೆಗೆ ಮುಂದಾಗುವುದನ್ನು ಸಹಿಸುವುದಿಲ್ಲ. ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದವರು ತಿಳಿಸಿದರು.