ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿರುವ ಸೆಸ್ಕ್ ಕ್ರಮವನ್ನು ಖಂಡಿಸಿ ರೈತ ಸಂಘದ ಸದಸ್ಯರು ಪೊರಕೆ ಪ್ರದರ್ಶನ ಮಾಡಿ ಪ್ರತಿಭಟಿಸಿದರು. 
ನ್ಯೂಸ್

ಪೊರಕೆ ಪ್ರದರ್ಶಿಸಿ ರೈತ ಸಂಘ ಪ್ರತಿಭಟನೆ

ಯಳಂದೂರು: ಅಂಬಳೆ ಗ್ರಾಮದಲ್ಲಿ ಹಳೆಯ ವಿದ್ಯುತ್ ಬಿಲ್ ಪಾವತಿ ಮಾಡದ ಮನೆಗಳ ಸಂಪರ್ಕವನ್ನು ಕಡಿತಗೊಳಿಸಲು ಮುಂದಾದ ಸೆಸ್ಕ್ ಅಧಿಕಾರಿಗಳನ್ನು ತಡೆದು, ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಅಂಬಳೆ ಗ್ರಾಮದ ಗ್ರಾಮ ಪಂಚಾಯಿತಿ ಸಮೀಪದ ಮನೆಗಳಲ್ಲಿ ವಿದ್ಯುತ್ ಬಿಲ್ ಬಾಕಿ ಇರುವ ಮನೆಗಳಿಗೆ ಎಇಇ ನಿಂಗರಾಜು ಹಾಗೂ ಜೆಇ ಮದನ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ, ಬಿಲ್ ಪಾವತಿಸದವರ ಸಂಪರ್ಕ ಕಡಿತಗೊಳಿಸುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ರೈತ ಸಂಘದ ಸದ್ಯಸರು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ವಿದ್ಯುತ್ ಹಳೆಯ ಬಾಕಿ ವಸೂಲಾತಿಗೆ ಮುಂದಾದ ಕೆಇಬಿ ಅಧಿಕಾರಿಗಳಿಗೆ ಪೊರಕೆ ಪ್ರದರ್ಶನ ಮಾಡುವ ಮೂಲಕ ರೈತ ಸಂಘವು ಎಚ್ಚರಿಕೆ ನೀಡಿತು. ಈ ರೀತಿ ವಿದ್ಯುತ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸುವುದು, ಹಳೆಯ ಬಾಕಿ ಪಾವತಿ ಮಾಡುವಂತೆ ಒತ್ತಡ ಹಾಕಿದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ರೈತ ಸಂಘದ ಬಸವಣ್ಣ, ಕುಮಾರ್, ಮಹದೇಸ್ವಾಮಿ, ಚೇತನ್, ಚಿನ್ನಸ್ವಾಮಿ, ಪುಟ್ಟಸ್ವಾಮಿ, ಸೇರಿದಂತೆ ಅಂಬಳೆ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.