ನ್ಯೂಸ್

ಪೆಟ್ಟು ಬಿದ್ದಾಗ ಬಂಡಾಯ ಸಹಜ

ಕಲಬುರಗಿ: ಮನುಷ್ಯನಿಗೆ ಜೀವನದಲ್ಲಿ ಪೆಟ್ಟು ಬಿದ್ದಾಗ ಬಂಡಾಯ ಏಳುವುದು ಸಹಜ ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಸಿದ್ಧಾರ್ಥ ಪ್ರಕಾಶನ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಸಹಯೋಗದಡಿ ಕಲಾ ಮಂಡಳದಲ್ಲಿ ದಲಿತ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಪ್ರಥಮ ಸ್ಮರಣೋತ್ಸವ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕವಿ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇಶದ ಮೊದಲ ಬಂಡಾಯ ಸಾಹಿತಿ ಕಡಕೋಳ ಮಡಿವಾಳಪ್ಪ. ಲಿಂಗದೀಕ್ಷೆ ಹಂಬಲವಿದ್ದರೂ ಅಂದಿನ ಸಮಾಜ ಅವರಿಗೆ ದೀಕ್ಷೆ ನೀಡಲಿಲ್ಲ. ಕೊನೆಗೆ ಶರಣಬಸವೇಶ್ವರರು ದೀಕ್ಷೆ ನೀಡಿದರು. ಅಂದಿನ ವ್ಯವಸ್ಥೆಯಿಂದ ಬೇಸತ್ತು ಮಡಿವಾಳಪ್ಪ ಬಂಡಾಯ ಸಾಹಿತಿಯಾದರು. ಅದರಂತೆ ಸಮಾಜದಲ್ಲಿನ ಜಾತಿ ಪದ್ಧತಿ ಚನ್ನಣ್ಣ ವಾಲೀಕಾರ ಅವರನ್ನು ಬಂಡಾಯ ಸಾಹಿತಿಯನ್ನಾಗಿ ಮಾಡಿತು ಎಂದರು.
ನಮ್ಮ ಹಕ್ಕು ಕೇಳಿದರೆ ಬಂಡಾಯ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಹಕ್ಕಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಹೋಗುವವರೆಗೂ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಚನ್ನಣ್ಣ ವಾಲೀಕಾರ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು. ಅವರ ಸಾಹಿತ್ಯದಲ್ಲಿ ಜೀವನದ ಸಫಲತೆ ಅಡಗಿದೆ. ಸಮಾಜ ಪರಿವರ್ತಿಸುವ ಶಕ್ತಿ ಅವರ ಸಾಹಿತ್ಯಕ್ಕಿದೆ ಎಂದರು.
ಖ್ಯಾತ ವೈದ್ಯ ಸಾಹಿತಿ ಡಾ.ಎಸ್.ಎಸ್. ಗುಬ್ಬಿ ಉದ್ಘಾಟಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಅವರು ಡಾ.ಚನ್ನಣ್ಣ ವಾಲೀಕಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್.ಟಿ. ಪೋತೆ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಸಿದ್ದಮ್ಮ ಚನ್ನಣ್ಣ ವಾಲೀಕಾರ, ಡಾ.ಕೆ.ಎಸ್. ಬಂಧು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ಶಿವರಾಜ ಅಂಡಗಿ, ವಿನೋದಕುಮಾರ ಜನೆವರಿ ಉಪಸ್ಥಿತರಿದ್ದರು.
ಸಿದ್ಧಾರ್ಥ ಚಿಮ್ಮಾಇದಲಾಯಿ, ದೇವೀಂದ್ರಪ್ಪ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.