ನ್ಯೂಸ್

ಪುಸ್ತಕ ಓದಿನಿಂದ ಆರೋಗ್ಯಯುತ ಸಮಾಜ ನಿರ್ಮಾಣ : ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅಭಿಮತ

ಬೆಂಗಳೂರು: ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಜಯನಗರದ ಶಾಲಿನಿ ಮೈದಾನದಲ್ಲಿ ವೀರಲೋಕ ಪ್ರಕಾಶನ ಹಮ್ಮಿಕೊಂಡಿರುವ ಮೂರು ದಿನಗಳ ‘ವೀರಲೋಕ ಪುಸ್ತಕ ಸಂತೆ-2’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀರಾಮನ ಪತ್ನಿ ಸೀತೆ ಯಾವ ಜಾತಿಯವಳು? ಆಕೆಗೆ ಜನ್ಮ ನೀಡಿದವರು ಯಾರು? ಎಂಬುದು ತಿಳಿದಿಲ್ಲ. ಆದರೂ ಅಕೆಯಲ್ಲಿನ ಮಾನವೀಯತೆ, ಸದ್ಗುಣ ಮತ್ತು ಸಂಸ್ಕಾರವನ್ನು ನೋಡಿ ಸೀತೆಯನ್ನು ಆರಾಧಿಸುತ್ತೇವೆ. ಹಾಗಾಗಿ ಜಾತಿ ಧರ್ಮದ ಹೆಸರಿನಲ್ಲಿ ಆರಂಭವಾಗಿರುವ ಹೊಡಿ ಬಡಿ ಸಂಸ್ಕೃತಿಯನ್ನು ಬಿಟ್ಟು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ಪುಸ್ತಕಗಳು ಸಹಕಾರಿಯಾಗಲಿವೆ ಎಂದರು.

ಪುಸ್ತಕ ಗೌರವಿಸದವ ಸಭ್ಯನಾಗಲಾರ:

ಪುಸ್ತಕ ಪರಿಚಾರಕ ಅಂಕೇಗೌಡ ಮಾತನಾಡಿ, ನಿತ್ಯ ಬೆಳಗ್ಗೆ ಒಂದು ಪತ್ರಿಕೆ, ತಿಂಗಳಿಗೆ ಒಂದು ಪುಸ್ತಕ ಓದದಿದ್ದರೆ ಅಂತಹವರ ಜೀವನ ಸಾರ್ಥಕವಾಗುವುದಿಲ್ಲ. ಇನ್ನು ಪುಸ್ತಕಗಳನ್ನು ಪ್ರೀತಿಸದ, ಗೌರವಿಸದ ಮತ್ತು ಶಿಸ್ತಿನಿಂದ ಇಡದ ವ್ಯಕ್ತಿ ಸಭ್ಯನಾಗಲಾರ. ಆದರೆ ಈ ಸಂತೆಯಲ್ಲಿ ಪುಸ್ತಕ ಲೋಕವನ್ನೇ ಸೃಷ್ಟಿಸುವ ಮೂಲಕ ಸರ್ಕಾರ ಮಾಡಲಾಗದ ಕೆಲಸವನ್ನು ವೀರಕಪುತ್ರ ಶ್ರೀನಿವಾಸ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ಬಳಿ 25 ಲಕ್ಷ ಪುಸ್ತಕಗಳಿವೆ, ಬಂದು ಓದುವವರಿಗೆ ಯಾವುದೇ ಶುಲ್ಕವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಿಗೆ ಅಗತ್ಯವಾದ ಪುಸ್ತಕಗಳೂ ಇವೆ. ನನ್ನ ಪುಸ್ತಕ ಮನೆಯನ್ನು ನಳಂಚ ವಿವಿ ಪ್ರತಿರೂಪ ಎನ್ನುತ್ತಾರೆ. ಆದರೆ ಅವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ದೊಡ್ಡ ಸವಾಲು ನನ್ನೆದುರಿಗಿದೆ ಎಂದರು.

ಭಾಷೆ ಕುಂಟುತ್ತಾ ಸಾಗಿದೆ:

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಮಾತನಾಡಿ, ದೇಶದ ವಿವಿಧ ರಾಜ್ಯ ಭಾಷೆಗಳ ಬೆಳವಣಿಗೆಗೆ ಹೋಲಿಸಿದರೆ ಕನ್ನಡ ಭಾಷೆ ಕುಂಟುತ್ತಾ ಸಾಗಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಪುಸ್ತಕ ವ್ಯಾಪಾರ 150 ಬಿಲಿಯನ್ ಡಾಲರ್. ಆದರೆ ಭಾರತದಲ್ಲಿ 5 ಬಿಲಿಯನ್ ಡಾಲರ್ ದಾಟಿಲ್ಲ. ದೇಶದಲ್ಲಿ ಓದುಗರು ಇದ್ದಾರೆ. ಆದರೆ ಪುಸ್ತಕಗಳು ನಿರೀಕ್ಷಿತ ಪ್ರಮಾಣದಲ್ಲಿ ಓದುಗರನ್ನು ತಲುಪುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ವೀರಲೋಕ ಪ್ರಕಾಶನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ಇತರರು ಇದ್ದರು.

ಜಾನಪದ ವೈಭವ

ಸಂತೆಯಲ್ಲಿ ಪುಸ್ತಕ ಪ್ರಕಟಣೆ ಹೇಗೆ ಎಂಬ ವಿಷಯ ಕುರಿತು ಲೇಖಕ ಅನಂತ ಕುಣಿಗಲ್ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾ ಭರತಹಳ್ಳಿ ಅವರ ‘ಬೇಸೂರ್’, ರವೀಂದ್ರ ವಂಶಿ ಅವರ ‘ಲ್ೈ ಸಕತ್ತಾಗಿತ್ತು ಕಣ್ರೀ’, ವಿ. ಶ್ರೀನಿವಾಸ ವಾಣಿಗರಹಳ್ಳಿ ಅವರ ‘ಜಾಲಿರೈಡ್’, ಧನಪಾಲ ನಾಗರಾಜಪ್ಪ ಅವರ ‘ಹವಳ ದ್ವೀಪ’, ಬಂಡುಕೋಳಿ ಅವರ ‘ಪರೂಕಾಳಿ’ ಹಾಗೂ ಸಂತೆಕಸಲಗೆರೆ ಪ್ರಕಾಶ್ ಅವರ ‘ಬೂಸ್ಟರ್ ಡೋಸ್ ಮುನಿಯಮ್ಮ’ ಕೃತಿಗಳು ಬಿಡುಗಡೆಯಾದವು. ಸಂಜೆ ‘ಜಾನಪದ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ ಸಂತೆಯ ಮೆರುಗು ಹೆಚ್ಚಿಸಿತು.

ಶಾಪಿಂಗ್ ಕೂಡ ಮಾಡಬಹುದು

ವೀರಲೋಕ ಪುಸ್ತಕ ಸಂತೆ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 9ರವರಗೆ ನಡೆಯಲಿದೆ. ಸಂತೆಯಲ್ಲಿ 80ಕ್ಕೂ ಅಧಿಕ ಪುಸ್ತಕ ಮಳಿಗೆಗಳಿದ್ದು, ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯಲಿವೆ. ಇದೇ ವೇಳೆ ವೀರಲೋಕ ಪುಸ್ತಕ ಮಳಿಗೆಯಲ್ಲಿ 20 ಕೃತಿಗಳ ಕಾಂಬೊ ಆರ್ ನೀಡಲಾಗುತ್ತಿದ್ದು, 4,385 ರೂ. ಬೆಲೆಯ ಪುಸ್ತಕಗಳು 3,299 ರೂ.ನಲ್ಲಿ ದೊರೆಯಲಿವೆ. ಸಂತೆಯಲ್ಲಿ 300ಕ್ಕೂ ಅಧಿಕ ಲೇಖಕರು ಪಾಲ್ಗೊಳ್ಳಲಿದ್ದು, ಅವರನ್ನು ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸಿ, ಹಸ್ತಾಕ್ಷರ ಪಡೆಯಬಹುದಾಗಿದೆ. ಪುಸ್ತಕಗಳ ಜೊತೆಗೆ ಇಷ್ಟದ ಆಹಾರ ಸವಿಯಲು ಆಹಾರ ಮಳಿಗೆ, ಮಕ್ಕಳಿಗಾಗಿ ಆಟಿಕೆಗಳ ಮಳಿಗೆ, ಗೃಹಿಣಿಯರಿಗೆ ಶಾಪಿಂಗ್ ಮಾಡಲು ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ತೆರೆಯಲಾಗಿದೆ.