ಚಿತ್ರದುರ್ಗ: ಆಪಾಧನೆಗಳ ಮೇಲೆ ಸಿಎಂ ರಾಜೀನಾಮೆ ಕೊಡಬೇಕು ಎನ್ನುವುದಾದರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮೇಲೂ ಬಹಳ ಗಂಭೀರವಾದ ಆರೋಪಗಳಿವೆ. ಅವರೂ ರಾಜೀನಾಮೆ ನೀಡಲಿ ಎಂದು ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಸಮೀಕ್ಷೆ ವೇಳೆ ಯಾವ ರೀತಿ ಬಿಜೆಪಿ ಗೆಲ್ಲಲ್ಲಿದೆ ಎಂಬ ವಿಚಾರವಾಗಿ ಸ್ಟಾಕ್ ಎಕ್ಸೆಂಜ್‌ನಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂಡನ್ ಬರ್ಗ್ ಬಹುದೊಡ್ಡ ಭ್ರಷ್ಟಾಚಾರವಾಗಿದ್ದು, ಮೋದಿ, ಶಾ ಅವರ ರಾಜೀನಾಮೆ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತಿ ಹೆಜ್ಜೆಯಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯವರು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಮೊದಲು ಪಿಎಂ ಅವರಿಂದ ರಾಜೀನಾಮೆ ಕೊಡಿಸಲಿ. ಆನಂತರ ಸಿಎಂ ಕೊಡಲಿದ್ದಾರೆ ಎಂದರು.
ಬಿಜೆಪಿ ವಿರುದ್ಧ ಯಾರ‌್ಯಾರು ಇದ್ದಾರೆ ಅಂತವರಿಗೆ ಬಂಧನ ಎಂಬುದು ಹೊಸತಲ್ಲ. ಈಗಾಗಲೇ 4 ವರ್ಷದಿಂದ ಜೈಲಿಗೆ ಹಾಕಿರುವುದನ್ನು ನೋಡುತ್ತ ಬಂದಿದ್ದೇವೆ. ಅದನ್ನು ಸಿಎಂ, ಸಚಿವರ ಮೇಲೂ ಪ್ರಯೋಗಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕಾನೂನು ಮತ್ತು ರಾಜಕೀಯ ಹೋರಾಟಕ್ಕೂ ಕಾಂಗ್ರೆಸ್‌ನವರು ಸಿದ್ಧರಿದ್ದೇವೆ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
2011ರಲ್ಲಿ ಅಧಿಕಾರದಲ್ಲಿದ್ದ ವೇಳೆ ಬಿಜೆಪಿಯವರು ಅಂದಿನ ರಾಜ್ಯಪಾಲರ ನಡೆ ಖಂಡಿಸಿದ್ದರು. 2004, 2017, 2024 ಈ ರೀತಿ ನಾಲ್ಕು ಬಾರಿ ಆಗಿರುವುದನ್ನು ಕಾಣಬಹುದು. ವಿಶ್ವದಲ್ಲೇ ಅಧಿಕಾರದಲ್ಲಿದ್ದ ಸಿಎಂ ಒಬ್ಬರನ್ನು 20 ಕೋಟಿ ರೂ. ಲಂಚ ಸಂಬಂಧ ಚೆಕ್ ಮೂಲಕ ಸ್ವೀಕರಿಸಿದ್ದರಿಂದ ಜೈಲಿಗೆ ಹಾಕಲಾಗಿತ್ತು. ಅಂತಹ ಕೆಲಸ ಸಿದ್ದರಾಮಯ್ಯ ಅವರು ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.