ಇ-ಖಾತಾ ಆರಂಭವಾದಾಗಿನಿಂದಲೂ ನಗರದ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಿಕೆ ಕಚೇರಿಗಳಿಗೆ ಭೇಟಿ ನೀಡಿದಲ್ಲಿ ಸರ್ವರ್ ಸಮಸ್ಯೆ ಎನ್ನುತ್ತಾರೆ. ಜತೆಗೆ ಸಂಬಂಧಿಸಿದ ಅಧಿಕಾರಿಯೂ ಇರುವುದಿಲ್ಲ. ಈ ಸಬೂಬು ಹೇಳುವುದರ ಹಿಂದೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೊರೆ ಹೋಗಲಿ ಎಂಬ ಪಿತೂರಿ ಇರುವ ಸಾಧ್ಯತೆ ಇದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ನೂರ್ ಮಹಮ್ಮದ್ ಮರ್ಚೆಂಟ್ ಆರೋಪಿಸಿದರು.
ತಮ್ಮಲ್ಲಿರುವ ದಾಖಲೆ ಪತ್ರಗಳನ್ನು ಹಿಡಿದು ಇ-ಖಾತೆಗಾಗಿ ಸಾರ್ವಜನಿಕರು ನಿತ್ಯ ಅಲೆದಾಡುತ್ತಿದ್ದಾರೆ. ಈ ವೇಳೆ ಒಂದಲ್ಲ ಒಂದು ಸಬೂಬು ಹೇಳುತ್ತಿದ್ದಾರೆ. ಸುಮಾರು 50-60 ವರ್ಷ ಹಿಂದಿನ ಮನೆಗೂ ಟೈಟಲ್ ಡೀಡ್ ತನ್ನಿ ಎಂದು ಹೇಳುವ ಹಲವಾರು ಉದಾಹರಣೆ ಇವೆ. ಈ ರೀತಿಯ ಮನೆ ನಿವಾಸಿಗಳು ಇದನ್ನು ತರಲು ಸಾಧ್ಯವೇ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಜತೆಗೆ, ಪಾಲಿಕೆ ಕಚೇರಿಗಳಲ್ಲಿ ಇ-ಖಾತೆ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ತಿಂಗಳಲ್ಲಿ ಹತ್ತು ದಿನ ರಜೆ, ಮೂರು ದಿನ ಸರ್ವರ್ ಡೌನ್, ಮೂರು ದಿನ ಸಿಬ್ಬಂದಿ ಸಿಗುವುದಿಲ್ಲ. ಹೀಗಾಗಿ ಮಧ್ಯವರ್ತಿಗಳ ಮೊರೆ ಹೋದರೆ ಕೆಲಸ ಸುಲಭ ಎನ್ನುವಂತಾಗಿದೆ. ಹೀಗಾಗಿ ಪಾಲಿಕೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕು ಎಂದು ಕೋರಿದರು.
ಮುಖಂಡರಾದ ಗಂಗಾಧರ್ ಹೈವೇ, ಅನ್ವರ್, ಸಯ್ಯದ್ ಅಬ್ಬಾಸ್, ಸಯ್ಯದ್ ಉಮರ್ ಇದ್ದರು.